ಬಂಟ್ವಾಳ: ಡಾ. ಬಾಬು ಜಗಜೀವನ್ ರಾಮ್ ಅವರ ಜೀವನಾದರ್ಶ, ಚಿಂತನೆಯನ್ನು ಪುನರಪಿಗೊಳಿಸುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಬೇಕಾಗಿದೆ ಎಂದು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರು ಹೇಳಿದರು.
ಬಂಟ್ವಾಳ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಬಂಟ್ವಾಳ ಪುರಸಭೆ ವತಿಯಿಂದ ತಾಪಂನ ಎಸ್‍ಜೆಎಸ್‍ವೈ ಸಭಾಂಗಣದಲ್ಲಿ ಮಂಗಳವಾರ ನಡೆದ ಡಾ.ಬಾಬು ಜಗಜೀವನ್ ರಾಮ್ ಅವರ 109ನೇ ಜನ್ಮ ದಿನಾಚರಣೆಯ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಬು ಜಗಜೀವನ್ ರಾಮ್ ರೂಪಿಸಿದ ಕಾರ್ಮಿಕ, ಆಹಾರ, ಕೃಷಿ ನೀತಿ ಸುಧಾರಣೆಗೊಳ್ಳಬೇಕಿದೆ ಎಂದರು.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಜನರು ಸಂವಿಧಾನಿಕ ಹಕ್ಕುಗಳನ್ನು ಪಡೆಯಲು ಹಾಗೂ ಸಮಾಜ ಮುಖ್ಯವಾಹಿನಿಗೆ ಬರಲು ಬಾಬಾ ಜಗಜೀವನ್ ರಾಮ್ ಅವರ ಪರಿಶ್ರಮ ಅನನ್ಯ. ಅವರ ಹಸಿರುಕ್ರಾಂತಿ ಯೋಜನೆ ಸರ್ವಕಾಲಿಕವಾದುದು. ಯುವ ಪೀಳಿಗೆಗೆ ಬಾಬಾ ಜಗಜೀವನ್ ರಾಮ್ ಅವರ ವ್ಯಕ್ತಿತ್ವ-ಜೀವನ ಚರಿತ್ರೆಯನ್ನು ಪರಿಚಯಿಸುವ ಕಾರ್ಯ ನಡೆಯಬೇಕೆಂದು ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ತಿಳಿಸಿದರು. ಬುಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಜಿಪಂ ಸದಸ್ಯ ರವೀಂದ್ರ ಕಂಬಳಿ, ತಾಪಂ ಸದಸ್ಯ ಅಬ್ಬಾಸ್ ಅಲಿ, ಕಾಂಗ್ರೆಸ್‍ನ ಎಸ್‍ಟಿಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾಣ ಮಾತನಾಡಿ ಶುಭ ಹಾರೈಸಿದರು.
ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಅವರು ಈ ಸಂದರ್ಭ ಉಪಸ್ಥಿತರಿದ್ದರು. ಹಿರಿಯ ಕಲಾವಿದ ಮಂಜು ವಿಟ್ಲ ಅವರು ಕಾರ್ಯಕ್ರಮ ನಿರೂಪಿಸಿದರು.
