ಬಂಟ್ವಾಳ: ಮರಳುಸಾಗಾಟದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರರೊಬ್ಬರು ಗಂಭೀರಗಾಯಗೊಂಡ ಘಟನೆ ಕೊಳ್ನಾಡು ಗ್ರಾಮದ ಪುದೊಟ್ಟು ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಸ್ಥಳೀಯ ನಿವಾಸಿ ಕೊಂಬು ಊದುವ ವೃತ್ತಿ ನಿರ್ವಹಿಸುವ ಭಾಸ್ಕರ್ ಪುರುಷ(60) ಎಂದು ಗುರುತಿಸಲಾಗಿದೆ.

ಇವರು ಇಂದು ಬೆಳಿಗ್ಗೆ ಸಾಲೆತ್ತೂರು ಮಂಚಿ ರ್ಸತೆಯಲ್ಲಿ ತೆರಳುತ್ತಿದ್ದ ಸಂದರ್ಭ ಅತಿ ವೇಗದಿಂದ ಬಂದ ಮರಳು ಸಾಗಾಟದ ಲಾರಿ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯ ತೀವ್ರತೆಗೆ ಭಾಸ್ಕರ್ ರವರು ರಸ್ತೆಗೆಸೆಯಲ್ಪಟ್ಟಿದ್ದು, ಅವರ ತಲೆ ಹಾಗೂ ಕೈಕಾಲಿಗೆ ಗಾಯಗಳಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರ ಪ್ರತಿಭಟನೆ; ಘಟನೆ ಬೆನ್ನಲ್ಲೇ ಸಾಲೆತ್ತೂರು ಮಂಚಿ ರಸ್ತೆಯಲ್ಲಿ ಅವ್ಯಾವಹತವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ, ಅತಿವೇಗದ ಚಾಲನೆಯಿಂದ ಸದ್ರಿ ರಸ್ತೆಯಲ್ಲಿ ಸಂಚರಿಸಲು ಭಯದ ವಾತಾವರಣ ನಿರ್ಮಾಣಗೊಂಡಿದೆ ಎಂದು ಆರೋಪಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಗಣಿ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಸೂಕ್ರ ಭರವಸೆ ಸಿಗುವ ವರೆಗೂ ರಸ್ತೆ ತಡೆನಡೆಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಗಣಿ ಇಲಾಖೆಯ ಅಧಿಕಾರಿ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿದರು.
ಇದೇ ವೇಳೆ ಅಕ್ರಮ ಮರಳುಗಾರಿಕೆ ಮತ್ತು ಕೇರಳಕ್ಕೆ ಅಕ್ರಮ ಮರಳು ಸಾಗಾಟದ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನ ಸೆಳೆದರು. ಸ್ಥಳೀಯರಿಗೆ ಮರಳು ದೊರಕುತ್ತಿಲ್ಲ, ಆದರೆ ನೆರೆಯ ಕೇರಳಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದೆ ಎಂದು ಆರೋಪಿಸಿದಾಗ ಪ್ರತಿಭಟನಾ ಕಾರರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳೀಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೊನೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಲೆತ್ತೂರಿನಲ್ಲಿ ಶಾಶ್ವತ ಚೆಕ್ ಪೋಸ್ಟ್ ನಿರ್ಮಿಸುವ ಭರವಸೆ ನೀಡಿದ ಬಳಿಕ ಸ್ಥಳೀಯರು ಪ್ರತಿಭಟನೆ ಹಿಂತೆಗೆದುಕೊಂಡರು.
ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ ಸ್ಥಳದಲ್ಲಿದ್ದು ಬಂದೋಬಸ್ತ್ ಒದಗಿಸಿದರು. ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶಚಂದ್ರ ಶೆಟ್ಟಿ, ಸದಸ್ಯರಾದ ವಿಶ್ವನಾಥ ಶೆಟ್ಟಿ, ಜಗದೀಶ್, ಪವಿತ್ರ ಪೂಂಜ, ತಾ.ಪಂ.ಸದಸ್ಯರಾದ ನಾರಾಯಣ ಶೆಟ್ಟಿ, ಸ್ಥಳೀಯರಾದ ಯೋಗಿಶ್ ಆಳ್ವ, ರಮೇಶ್ ಶೆಟ್ಟಿ ಕಾರಾಜೆ, ದೇವದಾಸ ಶೆಟ್ಟಿ ಪಾಲ್ತಾಜೆ, ಅಶ್ರಫ್ ಸಾಲೆತ್ತೂರು, ಮೊದಲಾದವರು ಉಪಸ್ಥಿತರಿದ್ದರು.





