ಜೀವನೋತ್ಸಾಹವೇ ಉತ್ಸವಗಳ ಬುನಾದಿ:
ಪೂಂಜ ದೇವಸ್ಥಾನದ ಅಭಿನಂದನಾ ಸಭೆಯಲ್ಲಿ ಪುನರೂರು ಅಭಿಮತ
ಮೂಡಬಿದರೆ: ಎಂತಹ ಸ್ಥಿತಿಯಲ್ಲಿಯೂ ಜೀವನ ಪ್ರೀತಿ, ಸಾಧಶೀಲ ಪ್ರವೃತ್ತಿ, ಭರವಸೆ ಮನುಷ್ಯನ ಬದುಕಿನಲ್ಲಿ ಬತ್ತಬಾರದು. ಜೀವನೋತ್ಸಾಹದ ವೃದ್ಧಿಯೇ ಹಬ್ಬ-ಉತ್ಸವಗಳ ಆಶಯ’ ಎಂದು ರಾಜ್ಯಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ನುಡಿದರು.
ಅವರು ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಪೂಂಜ ಪಂಚದುರ್ಗಾಪವೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಅಭಿನಂದನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಮುಂಬಯಿಯ ಆಧ್ಯಾತ್ಮಿಕ ಗುರು ಪ್ರವೀಣಶಾಂತಿ ಮಾತನಾಡಿ ‘ದ್ವೇಷ, ಅಸೂಯೆ, ಸಂಕುಚಿತ ಮನೋಭಾವದಿಂದ ಮುಕ್ತವಾದ ಮನಸ್ಸಿಗೆ ಸಿಗುವ ಆನಂದ ಅಪರಿಮಿತ. ಸದ್ಭಾವವೇ ನಮ್ಮ ಸಂಪತ್ತಾಗಲಿ’ ಎಂದರು. ಮೂಡುಬಿದಿರೆಯ ಉದ್ಯಮ ಶ್ರೀಪತಿ ಭಟ್ ಸಂದರ್ಭೊಚಿತವಾಗಿ ಮಾತನಾಡಿದರು. ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ವಂದನಾ ಭಾಷಣ ಮಾಡಿದರು.
ಬ್ರಹ್ಮಕಲಶೋತ್ವವದ ಗೌರವಾಧ್ಯಕ್ಷ ಅನಂತ ಆಚಾರ್ಯ, ಅಧ್ಯಕ್ಷ ಕೇದಗೆ ವಸಂತ ಶೆಟ್ಟಿ, ಕಾರ್ಯಾಧ್ಯಕ್ಷ ರಮೇಶ ಪೂಜಾರಿ ಮಂಜಿಲ, ಕ್ಷೇತ್ರದ ಅಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ, ತಂತ್ರಿ ಬಾಲಕೃಷ್ಣ ಪಾಂಗಣ್ಣಾಯರನ್ನು ಸನ್ಮಾನಿಸಲಾಯಿತು. ಪ್ರಭಾಕರ ಪ್ರಭು ಸ್ವಾಗತಿಸಿ, ಸತೀಶ್ ಪೂಜಾರಿ ಮಠ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಆಳ್ವಾಸ್ ಧೀಂಕಿಟ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ತರಣಿಸೇನ ಕಾಳಗ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸೃತ್ಯ ವೈವಿಧ್ಯ ನಡೆಯಿತು. ಸಾಂಸ್ಕೃತಿಕ ಸಮಿತಿ ಸಂಚಾಲಕ ಉಮೇಶ್ ಶೆಟ್ಟಿ ಪಾಲ್ಯ ಸಹಕರಿಸಿದರು.


