ಬಂಟ್ವಾಳ:ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಸಂವಿಧಾನಿಕವಾಗಿ ಒಟ್ಟು 11 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕಗೊಳಿಸುವ ಮೂಲಕ ಖಜಾನೆ ಲೂಟಿ ಮಾಡಲು ಮುಂದಾಗಿದ್ದು, ಈ ಬಗ್ಗೆ ರಾಜ್ಯ ಹೈಕೋರ್ಟಿನ ದ್ವಿಸದಸ್ಯ ಪೀಠವು ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಬಿ.ಸಿ.ರೋಡ್‍ನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ರೈತರ ಆತ್ಮಹತ್ಯೆ ನಡೆಯುತ್ತಿದ್ದು, ಬಹುತೇಕ ಕಡೆಗಳಲ್ಲಿ ತೀವ್ರ ಬರಗಾಲದಿಂದ ಕುಡಿಯುವ ನೀರಿಗೂ ತತ್ತರಿಸುವಂತಾಗಿದೆ. ಈ ಬಗ್ಗೆ ಕಾಳಜಿ ವಹಿಸುವ ಬದಲಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತನ್ನ ಕುರ್ಚಿ ಭದ್ರಪಡಿಸಲು ಸಂವಿಧಾನ ಬಾಹಿರವಾಗಿ ಒಟ್ಟು 11 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸುವ ಮೂಲಕ ಸರ್ಕಾರದ ಖಜಾನೆಗೆ ಕೋಟ್ಯಾಂತರ ಮೊತ್ತದ ಹೊರೆ ಹೊರಿಸಿದ್ದಾರೆ ಎಂದು ಆರೋಪಿಸಿದರು.
26btl-Kjpಇದರಿಂದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸ್ಪಂದಿಸಿದ ಹೈಕೋರ್ಟ್‍ನ ರವಿಮಳಿ ಮಠ್ ಮತ್ತು ಸುಬ್ರತೋರಾವ್ ಮುಖರ್ಜಿ ಅವರನ್ನೊಳಗೊಂಡ ಪೀಠವು ಕ್ಯಾಬಿನೆಟ್ ದರ್ಜೆ ಮಾನ್ಯತೆ ಪಡೆದಿರುವ ಈ 11 ಮಂದಿ ಶಾಸಕರಿಗೆ ನೋಟಿಸ್ ಜಾರಿಗೊಳಿಸಿದ್ದು, ಶೀಘ್ರವೇ ಈ ಆದೇಶವನ್ನು ರದ್ದುಗೊಳಿಸಲಿದೆ ಎಂದರು.
ಈ ಹಿಂದೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದೇ ರೀತಿ 24 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕಗೊಳಿಸಿರುವುದನ್ನು ಅಲ್ಲಿನ ಹೈಕೋರ್ಟು ರದ್ದುಗೊಳಿಸಿತ್ತು ಎಂದು ಅವರು ತಿಳಿಸಿದರು. ಎತ್ತಿನಹೊಳೆ ಯೋಜನೆ ಮೂಲಕ ರೂ 12,500ಕೋಟಿ ಮೊತ್ತದ ಅನುದಾನ ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಎಚ್‍ಡಿಕೆ ವಿರುದ್ಧ ಆಕ್ರೋಶ:
ಮುಖ್ಯಮಂತ್ರಿ ಸಿದ್ಧ್ದರಾಮಯ್ಯ ಅವರ ಲಕ್ಷಾಂತರ ಮೌಲ್ಯದ ‘ಕೈಗಡಿಯಾರ’ ಬಗ್ಗೆ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಂಟ್ವಾಳ ತಾಲ್ಲೂಕಿನ ಚಿತ್ರನಟಿ ರಾಧಿಕಾ ಇವರಿಗೆ ರೂ 2.5 ಕೋಟಿ ವೆಚ್ಚದ ವಜ್ರದ ನೆಕ್ಲೆಸ್ ಮತ್ತು ಇಲ್ಲಿನ ಮುಡಿಪು ಪ್ರದೇಶದಲ್ಲಿ ಕೋಟ್ಯಂತರ ಮೌಲ್ಯದ ಜಮೀನು ಖರೀದಿಸಿ ಕೊಟ್ಟಿದ್ದಾರೆ. ನೈಸ್ ರಸ್ತೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಾ, ನೈಸ್ ಸಂಸ್ಥೆ ಮುಖ್ಯಸ್ಥ ಶಾಸಕ ಅಶೋಕ್ ಖೇಣಿ ಜೊತೆಗೆ ಹಿಂಬಾಗಿಲಿನ ಮೂಲಕ ವ್ಯವಹಾರ ಕುದುರಿಸುತ್ತಾ ದುಡ್ಡಿನ ರಾಜಕೀಯ ನಡೆಸುತ್ತಿದ್ದಾರೆ. ತನ್ನ ಪುತ್ರನ ಹೆಸರಿನಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಸಿನೆಮಾ ಮಾಡುತ್ತಿರುವ ಇವರು ‘ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇತರರ ಬಟ್ಟಲಿನ ನೊಣ’ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನೊಂದೆಡೆ ಕೇಂದ್ರ ರೈಲ್ವೆ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಗೆ ಪೂರಕವಾಗಿಲ್ಲ ಎಂದು ಹೇಳಿದ ಅವರು, ಮಂಗಳೂರು-ಬೆಂಗಳೂರು ಮಧ್ಯೆ ಹಗಲು ರೈಲು ಓಡಿಸುವುದು ಹಗಲು ಕನಸಾಗಿಯೇ ಉಳಿದಿದೆ ಎಂದು ಟೀಕಿಸಿದರು.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಇವರ ಸಹೋದರ ಲಕ್ಷ್ಮಣ ಗೌಡ ಅವರು ಕೊಡಗಿನಲ್ಲಿ ಒಟ್ಟು 500 ಎಕ್ರೆ ಅಕ್ರಮ ಜಮೀನು ಖರೀದಿಗೆ ಸಂಬಂಧಿಸಿದಂತೆ ಶೀಘ್ರವೇ ದಾಖಲೆ ಬಿಡುಗಡೆಗೊಳಿಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ರಾಜಣ್ಣ, ಜಿಲ್ಲಾ ಯುವ ಘಟಕ ಅಧ್ಯಕ್ಷ ಮೋಹನ್ ಚಂದ್ರ, ರಾಜ್ಯ ಯುವ ಘಟಕ ಪ್ಧಾನ ಕಾರ್ಯದರ್ಶಿ ಫೈಝಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *