ಬಂಟ್ವಾಳ: ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಪುರಸಭಾ ವ್ಯಾಪ್ತಿಯ ವಾಡರ್್ ಸಂಖ್ಯೆ 3ರ ನಾಗರೀಕರು ಸೋಮವಾರ ಪುರಸಭಾ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ನೀರು ಪೂರೈಸುವ ಕೊಳವೆ ಬಾವಿ


ಕೈಕೊಟ್ಟ ಹಿನ್ನಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಇಲ್ಲಿನ ಕುದನೆ ಗುಡ್ಡೆ, ಪಣೆಕಲ, ಮಣಿ ಮತ್ತಿತರ ಪರಿಸರದ ಜನರು ಕುಡಿಯಲು ಹಾಗೂ ದಿನಬಳಕೆ ನೀರಿಲ್ಲದೆ ಪರಿತಪಿಸಿದ್ದರು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದರೂ ಪರಿಹಾರ ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ನಾಗರೀಕರು ಪುರಸಭೆ ಕಾರ್ಯಲಯದ ಮುಂದೆ ಧರಣಿ ಕೂತರು. ತಕ್ಷಣ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೊಸ ಕೊಳವೆ ಬಾವಿ ಹಾಕಿಕೊಡುವಂತೆ ಪಟ್ಟು ಹಿಡಿದಿದ್ದರು. ಈ ಸಂದರ್ಭ ಪ್ರತಿಭಟನಾ ನಿರತರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಸುದೀರ್ಘ ಕಾಲ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿ ನೀರು ಪೂರೈಕೆ ಮಾಡುವ ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅವರೇ ಈ ವಾರ್ಡನ್ನು ಪ್ರತಿನಿಧಿಸುತ್ತಿದ್ದು ನಾಗರೀಕರು ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಬಗೆಹರಿಸಲು ಪ್ರಯತ್ನಿಸದಿರುವುದೂ ನಾಗರಿಕರ ಕೋಪಕ್ಕೆ ಕಾರಣವಾಗಿದೆ.
ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಜಗದೀಶ ಕುಂದರ್, ಮುಖ್ಯಾಧಿಕಾರಿ ಸುಧಾಕರ, ಎಂಜಿನಿಯರ್ ಡಿಮೆಲ್ಲೋ, ಜನಾರ್ದನ ಚೆಂಡ್ತಿಮಾರ್, ವೆಂಕಪ್ಪ ಪೂಜಾರಿ, ವಿಶ್ವನಾಥ ಗೌಡ ಮಣಿ ಮತ್ತಿತರರು ಹಾಜರಿದ್ದರು.
