ಮೂಡುಬಿದಿರೆ: ಕಳೆದ ಮೂರು ಅವಧಿಯಲ್ಲಿ ಪುತ್ತಿಗೆ ಜಿ.ಪಂ ಕ್ಷೇತ್ರದಕ್ಕೆ ಒಂದೇ ಕುಟುಂಬದ ಮೂವರಿಗೆ ಟಿಕೆಟ್ ನೀಡಿದ ಬಿಜೆಪಿ ಪಕ್ಷದ ನಿಲುವು, ಕೆಲವು ಮುಖಂಡರು ಹಾಗೂ ಹಲವು ಕಾರ್ಯಕರ್ತರಿಗೆ ಅಸಮಾಧಾನವನ್ನು ಉಂಟು ಮಾಡಿದೆ. ಇದಷ್ಟೇ ಅಲ್ಲದೇ ಪಕ್ಷದ ಯುವನಾಯಕರೊಬ್ಬರನ್ನು ಅವಗಣನೆ ಮಾಡಿದ್ದು, ಪಕ್ಷದಲ್ಲಿ ಬಿನ್ನಮತ ಈಗಾಗಲೇ ಸ್ಪೋಟಗೊಂಡಿದೆ.
ಪುತ್ತಿಗೆ ಕ್ಷೇತ್ರದಿಂದ ಬಿಜೆಪಿ ಯುವ ನಾಯಕ ರಂಜಿತ್ ಪೂಜಾರಿ ಅವರಿಗೆ ಜಿ.ಪಂ ಟಿಕೆಟ್ ನೀಡಬೇಕೆಂದು ಶೇ.90ರಷ್ಟು ಕಾರ್ಯಕರ್ತರ ಬೇಡಿಕೆಯಾಗಿತ್ತು. ಪಕ್ಷದ ಜಿಲ್ಲಾ ವರಿಷ್ಠರು ಈ ಕುರಿತು ಸ್ಥಳೀಯ ಒಂದಿಬ್ಬರು ಮುಖಂಡರ ಜೊತೆ ಚರ್ಚಿಸಿದಾಗ, ಕೆ.ಪಿ ಸುಚರಿತ ಶೆಟ್ಟಿ ಅವರ ಹೆಸರು ಕೇಳಿ ಬಂತು. ಅದರಂತೆ ಪಕ್ಷವು ಸುಚರಿತ ಶೆಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿದ್ದು, ನಾಮಪತ್ರ ಸಲ್ಲಿಕೆಯೂ ಆಗಿದೆ. ಆದರೆ ಅಸಮಾಧಾನದ ಹೊಗೆ ಬಿಜೆಪಿಯಲ್ಲಿ ದಟ್ಟವಾಗಿ ಕಾಣಿಸತೊಡಗಿದೆ.
ಏಕೆ ವಿರೋಧ?:
ಬಿಲ್ಲವ ಮತದಾರರು, ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಪುತ್ತಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಯುವ ನಾಯಕ, ಬಿಲ್ಲವ ಸಮುದಾಯದ ಚಂದ್ರಹಾಸ್ ಸನಿಲ್ ಅವರಿಗೆ ಟಿಕೆಟ್ ನೀಡಿದ್ದು, ಬಿಜೆಪಿಯಲ್ಲೂ ಯುವಕರಿಗೆ ಅವಕಾಶ ನೀಡಬೇಕೆಂಬುವುದು ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ. ಯುವ ಕಾರ್ಯಕರ್ತರೇ ಹೆಚ್ಚಿರುವ ಮೂಡುಬಿದರೆ ಬಿಜೆಪಿಯಲ್ಲಿ ಇಂತಹದೊಂದು ಅಭಿಪ್ರಾಯ ಕೇಳಿಬರುವುದು ಸಹಜವೂ ಕೂಡ. ಬಿಲ್ಲವ ಸಮುದಾಯದ ರಂಜಿತ್ ಪೂಜಾರಿ ಅವರು ಅಭ್ಯರ್ಥಿಯಾದರೆ, ಬಿಲ್ಲವ ಸಮುದಾಯದ ಚಂದ್ರಹಾಸ್ ಸನಿಲ್( ಕಾಂಗ್ರೆಸ್) ಅವರಿಗೆ ತೀವ್ರ ಪೈಪೋಟಿ ನೀಡಿ ಗೆಲ್ಲಬಹುದೆನ್ನುವ ಲೆಕ್ಕಚಾರವೂ ಕೂಡ ಇದಕ್ಕೆ ಕಾರಣವಾಗಿತ್ತು.
ಸುಚರಿತ ಶೆಟ್ಟಿ ಅವರು ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಪಾಲಡ್ಕ ಕ್ಷೇತ್ರದಿಂದ ಸ್ಪರ್ಧಿಸಿ ಬೆರಳೆಣಿಯ ಮತಗಳಿಂದ ಗೆಲುವು ಸಾಧಿಸಿದರು. ಅವರ ಪತ್ನಿ ಹಾಗೂ ಸಹೋದರ ಪಾಲಡ್ಕ ಪಂಚಾಯಿತಿಯ ವಿವಿಧ ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದರೂ, ಪರಾಭವಗೊಂಡಿದ್ದರು. ಇದು ಕೂಡ ಸುಚರಿತ ಶೆಟ್ಟಿ ಅವರ ಗೆಲುವಿಗೆ ತೊಡಕಾಗುವ ಸಂಭವವಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.
ಬಿಜೆಪಿ ಮೂಡುಬಿದಿರೆ ಕ್ಷೇತ್ರ ಅಧ್ಯಕ್ಷರಾಗಿ ಬಿಜೆಪಿಯನ್ನು ಬಲಪಡಿಸಲು ಪ್ರಯತ್ನಿಸಿರುವ ಅನುಭವಿ ರಾಜಕಾರಣಿ ಸುಚರಿತ ಶೆಟ್ಟಿ ಅವರ ವರ್ಷಸ್ಸು ಪುತ್ತಿಗೆ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಇಲ್ಲಿದಿರುವುದು ಕೂಡ ಕಾರ್ಯಕರ್ತರ ವಿರೋಧಕ್ಕೆ ಕಾರಣವಾಗಿದೆ.
ಮೂವರು ಬಂಟ ಅಭ್ಯರ್ಥಿಗಳು:
ಪುತ್ತಿಗೆ ಕ್ಷೇತ್ರವೊಂದರಲ್ಲಿ ಮೂವರು ಬಂಟ ಸಮುದಾಯದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಂಟ ಸಮಾಜದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ತೋಡಾರು ದಿವಾಕರ ಶೆಟ್ಟಿ(ಜೆಡಿಎಸ್) ಹಾಗೂ ಕಾರ್ಮಿಕ ಸಂಘಟನೆಯ ಮೂಲಕ ಕ್ಷೇತ್ರದುದ್ದಕ್ಕೂ ಸಂಚರಿಸುವ ಯಾದವ ಶೆಟ್ಟಿ( ಸಿಪಿಐಎಂ) ಸ್ಪರ್ಧಾ ಕಣದಲ್ಲಿರುವುದರಿಂದ ಬಂಟ ಸಮುದಾಯದ ಮತಗಳು ಕೂಡ ಹಂಚಿಕೆಯಾದಲ್ಲಿ ಸುಚರಿತ ಶೆಟ್ಟಿಯವರಿಗೆ ವ್ಯತಿರಿಕ್ತ ಪರಿಣಾಮ ಬೀಳಬಹುದೆನ್ನುವುದು ಪಕ್ಷದೊಳಗಿನ ಭಿನ್ನಮತಿಯರ ಅಭಿಪ್ರಾಯ.
