ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಲ್ಲಿ ಅನಧಿಕೃತವಾಗಿ ಫಾಸ್ಟ್ಫುಡ್ ಅಂಗಡಿಗಳು ತಲೆ ಎತ್ತಿರುವ ಬೆನ್ನಲ್ಲೇ, ಗುರುವಾರ ಏಕಾಏಕಿಯಾಗಿ ಮಧ್ಯಾಹ್ನದ ವೇಳೆ ಅಕ್ರಮ ಮೀನು ಮಾರುಕಟ್ಟೆಯೊಂದು ಸ್ಥಾಪನೆಯಾಗಿರುವುದು ಕಂಡುಬಂದಿದೆ.
ದಿಢೀರನೇ ಎದ್ದು ನಿಂತಿರುವ ಈ ಮೀನುಮಾರುಕಟ್ಟೆಯಿಂದ ಪುರಸಭಾ ಡಳಿತ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕಳೆದ ಕೆಲವು ಸಮಯಗಳ ಹಿಂದೆ ಮೇಲ್ಸೇತುವೆ ಅಡಿಯಲ್ಲಿ ದಿಡೀರನೇ ಮೀನುಮಾರುಕಟ್ಟೆ ತಲೆ ಎತ್ತಿ ನಿಂತಿತ್ತು. ಸುದ್ದಿ ತಿಳಿದ ಪುರಸಭೆ ತಕ್ಷಣ ಕಾರ್ಯಾಚರಣೆ ನಡೆಸಿ ಅದನ್ನು ತೆರವು ಗೊಳಿಸಿತ್ತು. ಇದೀಗ ಬಿ.ಸಿ.ರೋಡು ವೃತ್ತ ಬಳಿ ಅನಧಿಕೃತ ಫಾಸ್ಟ್ ಫುಡ್ ಅಂಗಡಿಗಳ ಪಕ್ಕದಲ್ಲೇ ಮೀನು ಮಾರುಕಟ್ಟೆ ತಲೆ ಎತ್ತಿರುವುದನ್ನು ಕಂಡು ಸಾರ್ವಜನಿಕರು ಪುರಸಭೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಾಧಿಕಾರಿ ಸುಧಾಕರ್ ಸ್ಥಳಕ್ಕೆ ತೆರಳಿ ಮೀನು ಮಾರಾಟಗಾರರಿಗೆ ಹಾಗೂ ಅಲ್ಲಿರುವ ಫಾಸ್ಟ್ ಫುಡ್ ಹಾಗೂ ಇತರ ಅನಧಿಕೃತ ಗೂಡಂಗಡಿಗಳನ್ನು ರಾತ್ರಿ ಒಳಗಾಗಿ ತೆರವು ಗೊಳಿಸುವಂತೆ ಎಚ್ಚರಿಕೆ ನೀಡಿದ್ದು, ಇಲ್ಲದಿದ್ದಲ್ಲಿ ಶುಕ್ರವಾರ ಬೆಳಿಗ್ಗೆ ಪುರಸಭೆಯೇ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ತಾಕೀತು ಮಾಡಿದ್ದಾರೆ.
