ಮೂಡುಬಿರೆ: ದಾಖಲೆಯ ಐದನೇ ಪರ್ಯಾಯ ಪೀಠಾರೋಹಣದ ಸಂಭ್ರಮದಲ್ಲಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಶನಿವಾರ ಸಂಜೆ ಜೈನಕಾಶಿಗೆ ಆಗಮಿಸಿ, ಶ್ರೀ ಜೈನಮಠದಲ್ಲಿ ಭಟ್ಟಾರಕ ಶ್ರೀಗಳವರಿಂದ ವಿನಯಾಂಜಲಿ ಸ್ವೀಕರಿಸಿದರು.

ಜೈನ-ವೈದಿಕ ಸಾಮರಸ್ಯಕ್ಕೆ ಮಾದರಿ:
ಪೇಜಾವರಶ್ರೀ ಆಶೀವರ್ಚನ ನೀಡುತ್ತಾ, ಕರಾವಳಿಯಲ್ಲಿ ಅವಿಭಜಿತ ದಕ ಜಿಲ್ಲೆಯಲ್ಲಿ ಜೈನ ಮತ್ತು ವೈದಿಕ ಮತೀಯ ಬಾಂಧವ್ಯ ಸಾಮರಸ್ಯಕ್ಕೆ ಉತ್ತಮ ಮಾದರಿಯಾಗಿದೆ. ತುಳುನಾಡಿನಲ್ಲಿ ಹಲವೆಡೆ ದೇವಳಗಳ ಒಡೆತನ ಜೈನರದ್ದಾದರೆ ಅರ್ಚಕರು ವೈದಿಕರಾಗಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೈನಧರ್ಮ ಅಹಿಂಸೆ ಮತ್ತು ನೈತಿಕತೆಗೆ ಹೆಚ್ಚಿನ ಪ್ರಚೋದನೆ ನೀಡುತ್ತಿದೆ ಎಂದು ಪೇಜಾವರಶ್ರೀಗಳವರು ಹೇಳಿದರು.
ಎಲ್ಲದರಲ್ಲಿಯೂ ಭಗವಂತನನ್ನು ಕಾಣುವುದು ಜೈನಮತದ ವಿಶೇಷತೆ ಎಂದ ಅವರು ಮಧ್ವಾಚಾರ್ಯರೂ ಯಜ್ಞಗಳಲ್ಲಿ ಹಿಂಸೆಯನ್ನು ಒಪ್ಪಿರಲಿಲ್ಲ ಎಂದರು.
ಭಟ್ಟಾರಕ ಶ್ರೀಗಳವರು ಮಠದ ವತಿಯಿಂದ ಪೇಜಾವರ ಶ್ರೀಗಳವರಿಗೆ ವಿನಯಾಂಜಲಿ ಸಲ್ಲಿಸಿ ಸಮ್ಮಾನಿಸಿದರು. ವಿಶ್ವದಾಖಲೆಯ ಐದನೇ ಬಾರಿಗೆ ಪರ್ಯಾಯ ಪೀಠವನ್ನೇರುವ ಶ್ರೀಗಳವರ ಸನಾತನ ಪರಂಪರೆಯ ಜಾಗೃತಿ ಕಾರ್ಯ ಆದರ್ಶ ಎಲ್ಲರಿಗೂ ದೊರೆಯುವಂತಾಗಲಿ ಎಂದವರು ನುಡಿದರು.
ಇದೇ ಸಂದರ್ಭದಲ್ಲಿ ಪಂಡಿತ್ ರೆಸಾರ್ಟ್ಟನ ಲಾಲ್ ಗೋಯಲ್ ದಂಪತಿಗಳು ಪೇಜಾವರ ಶ್ರೀಗಳವರನ್ನು ಗೌರವಿಸಿದರು.
ಪಟ್ನಶೆಟ್ಟಿ ಸುದೇಶ್ ಕುಮಾರ್, ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಬಾಹುಬಲಿ ಪ್ರಸಾದ್ , ಕೆ.ಕೃಷ್ಣರಾಜ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
