ಆರೋಪಿ ಬಂಧನಕ್ಕೆ ಗಡುವು, ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ ಎಚ್ಚರಿಕೆ
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಲ್ಲಿ ಗುತ್ತಿಗೆದಾರರೊಬ್ಬರು ಅಡವಿಟ್ಟಿದ್ದ ರೂ 4ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಕಳೆದ ಡಿ.29ರಂದು ಬೆಳಿಗ್ಗೆ ಹೊರಗೆ ಬಂದು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಳಿತುಕೊಳ್ಳುವ ವೇಳೆ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸದಿದ್ದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಇಲ್ಲಿನ ತುಳುನಾಡು ರಕ್ಷಣಾ ವೇದಿಕೆ ಎಚ್ಚರಿಸಿದೆ.
ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ಆರೋಪಿ ಪೊನ್ನೋಡಿ ನಿವಾಸಿ ಸುಮಿತ್ ಆಳ್ವನನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ಹಲವು ವರ್ಷಗಳಿಂದ ಗುತ್ತಿಗೆದಾರರಾಗಿರುವ ಇಲ್ಲಿನ ನರ್ವಲ್ದಡ್ಡ ನಿವಾಸಿ ಮೋಹನ ಶೆಟ್ಟಿ ಎಂಬವರಿಗೆ ಈ ಹಿಂದೆಯೂ ಹಫ್ತಾ ವಸೂಲಿಗಾಗಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ ಕೊಲೆಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಮಿತ್ ಆಳ್ವ ವಿರುದ್ಧ ಈಗಾಗಲೇ ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಇಲ್ಲಿನ ಟಿಂಬರ್ ಉದ್ಯಮಿ ಶರೀಫ್ ಎಂಬವರಿಗೆ ಮೀಟರ್ ಬಡ್ಡಿ ನೆಲೆಯಲ್ಲಿ ನೀಡಿದ ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ಸಂಬಂಧ ಇಲ್ಲದಿದ್ದರೂ ಅನಗತ್ಯವಾಗಿ ಗುತ್ತಿಗೆದಾರ ಮೋಹನ ಶೆಟ್ಟಿ ಅವರ ಕಾರು ಸಹಿತ ಚಿನ್ನಾಭರಣ ದರೋಡೆ ಮಾಡಲಾಗಿದೆ. ಈ ಘಟನೆ ನಡೆದ ಮರುದಿನವೇ ಮೊಡಂಕಾಪು ರೈಲ್ವೆ ಮೇಲ್ಸೇತುವೆ ಬಳಿ ಅನಾಥ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು, ಅದರಲ್ಲಿದ್ದ ಚೆಕ್ ಪುಸ್ತಕ, ಕಟ್ಟಡ ನಕಾಶೆ, ತೆರಿಗೆ ಮತ್ತಿತರ ಕಡತ ಮತ್ತಿತರ ದಾಖಲೆಪತ್ರ ತೆಗೆದು ಕಾರಿಗೆ ಹಾನಿ ಮಾಡಲಾಗಿದೆ. ಆರೋಪಿಯು ನಿರಾತಂಕವಾಗಿ ಓಡಾಡಿಕೊಂಡಿದ್ದರೂ ಪೊಲೀಸರು ಮಾತ್ರ ಎರಡೂ ಕಡೆ ದುಡ್ಡು ಪಡೆದು ಆತನನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರ ಮೋಹನ ಶೆಟ್ಟಿ, ಸಮಿತಿ ಪ್ರಮುಖರಾದ ರಮೇಶ ಶೆಟ್ಟಿ, ಗಣೇಶ ಶೆಟ್ಟಿ, ಉಮೇಶ ಆಚಾರ್ಯ ಮತ್ತಿತರರು ಇದ್ದರು.
