ಗ್ರಾಮೀಣ ರಸ್ತೆ ಅಭಿವೃದ್ಧಿಗೆ ರೂ 14ಕೋಟಿ: ಸಚಿವ ರೈ
ಬಂಟ್ವಾಳ:ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇವಲ ಮೂರು ವಾರದೊಳಗೆ ಇಲ್ಲಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒಟ್ಟು ರೂ 14ಕೋಟಿ ಮೊತ್ತದ ಪ್ರಸ್ತಾವನೆ ಕಳುಹಿಸಿ ಆಡಳಿತಾತ್ಮಕ ಮಂಜೂರಾತಿ ಪಡೆದು ಸವಾಲು ಎಂಬಂತೆ ತ್ವರಿತವಾಗಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಸಿದ್ಧಕಟ್ಟೆ-ಕರ್ಪೆ-ಅಣ್ಣಳಿಕೆ ರಸ್ತೆಗೆ ರೂ 4ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸಿದ್ಧಕಟ್ಟೆಯಲ್ಲಿ ನಡೆದ ಸಾರ್ವಜನಿಕ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ವಿರೋಧ ಪಕ್ಷದ ಶಾಸಕನಾಗಿದ್ದರೂ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ರೂ 126ಕೋಟಿ ವೆಚ್ಚದ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರುಗೊಳಿಸಿಸಲಾಗಿದೆ. ಈ ಪೈಕಿ ಇಲ್ಲಿನ ಸಂಗಬೆಟ್ಟು ಫಲ್ಗುಣಿ ಹೊಳೆಯಿಂದ 16 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ಜ್ಯಾಕ್‍ವೆಲ್ ಮತ್ತು ಶುದ್ಧೀಕರಣ ಘಟಕ ಸಹಿತ ಒಟ್ಟು ರೂ 36ಕೋಟಿ ವೆಚ್ಚದಲ್ಲಿ ಈಗಾಗಲೇ ಶೇ.50ರಷ್ಟು ಟ್ಯಾಂಕ್ ನಿರ್ಮಾಣ, ಪೈಪ್‍ಲೈನ್ ಮತ್ತಿತರ ಕಾಮಗಾರಿ ಪೂರ್ಣಗೊಂಡಿದೆ. ಭಾರೀ ತಿರುವು ಮತ್ತು ಕಿರಿದಾದ ಬಂಟ್ವಾಳ-ಮೂಡುಬಿದ್ರೆ-ಮೂಲ್ಕಿ ರಸ್ತೆಯನ್ನು ಕೆಸಿಎಫ್ ವಿಶೇಷ ಯೋಜನೆಯಡಿ ದ್ವಿಪಥ ರಸ್ತೆಯನ್ನಾಗಿ ಶೀಘ್ರವೇ ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರೂ 1ಕೋಟಿ ವೆಚ್ಚದಲ್ಲಿ ಸಿದ್ಧಕಟ್ಟೆ ಪೇಟೆ ರಸ್ತೆ ಅಭಿವೃದ್ಧಿ ಮತ್ತು ಚರಂಡಿ ನಿರ್ಮಾಣ, ರೂ 2ಕೋಟಿ ವೆಚ್ಚದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ, ಪಶು ಚಿಕಿತ್ಸಾಲಯ ಮಂಜೂರು, ರೂ 50ಲಕ್ಷ ವೆಚ್ಚದಲ್ಲಿ ಸಿದ್ಧಕಟ್ಟೆ-ಹೊಕ್ಕಾಡಿಗೋಳಿ ರಸ್ತೆ ಮರು ಡಾಂಬರೀಕರಣ, ರೂ 3.60ಕೋಟಿ ವೆಚ್ಚದಲ್ಲಿ ಪೂಂಜ-ಅಜ್ಜಿಬೆಟ್ಟು ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗಾಗಲೇ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ ರಾಯಿ-ಮೂಜೆ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊಂಡಿದ್ದು, ಶೀಘ್ರವೇ ಕಲ್ಲೇರಿ-ಮುಲ್ಲಾರಪಟ್ನ, ಸಿದ್ಧಕಟ್ಟೆ-ಕೊನೆರೊಟ್ಟು, ಕಲ್ಕುರಿ-ಮಾಡಮೆ ರಸ್ತೆ ಅಭಿವೃದ್ಧಿಪಡಿಸುವುದಾಗಿ ಅವರು ಭರವಸೆ ನೀಡಿದರು.

5btl-Siddakatte
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಾನಂದ ರೈ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಉಪಾಧ್ಯಕ್ಷೆ ವಿನಯ ಡಿ.ಪೂಜಾರಿ, ಬಿಲ್ಲವ ಮುಖಂಡ ಗೋಪಾಲ ಪೂಜಾರಿ, ಗುತ್ತಿಗೆದಾರ ಡಿ.ಆರ್.ರಾಜು, ಎಂಜಿನಿಯರ್ ಅರುಣ್ ಪ್ರಕಾಶ್, ಚಿದಂಬರಂ, ಪ್ರಮುಖರಾದ ಅಶೋಕ ಆಚಾರ್ಯ, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಸೀತಾರಾಮ ಶೆಟ್ಟಿ, ಉಮೇಶ ಶೆಟ್ಟಿ ಕೊನೆರೊಟ್ಟು, ಜನಾರ್ಧನ ಬಂಗೇರ, ದಿನೇಶ ಶೆಟ್ಟಿಗಾರ್, ಲಾರೆನ್ಸ್ ಮಿನೇಜಸ್, ಜಯಕರ ಶೆಟ್ಟಿ ಪರನೀರು ಮತ್ತಿತರರು ಇದ್ದರು.
ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಉಮೇಶ ಭಟ್ ಪ್ರಾಸ್ತಾವಿಕ ಮಾತನಾಡಿದರು. ಸಂಗಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಭಾಕರ ಪ್ರಭು ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *