ಬಂಟ್ವಾಳ : ಪಾಣೆಮಂಗಳೂರು ನಿವಾಸಿಯೋರ್ವರು ಅಬುದಾಬಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಮೃತರನ್ನು ಪಾಣೆಮಂಗಳೂರು ಸಮೀಪದ ಮೆಲ್ಕಾರ್-ರೆಂಗೇಲು ರಸ್ತೆ ನಿವಾಸಿ ಅಬ್ದುಲ್ ಖಾದರ್ ಬಿನ್ ಬಾವಾ ಹಾಜಿ (48) ಎಂದು ಹೆಸರಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದ ಇವರು ಕೆಲವು ವರ್ಷಗಳಿಂದ ಅಬುದಾಬಿಯ ಕಾಲೇಜುವೊಂದರಲ್ಲಿ ಮೆಸೆಂಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸುಮಾರು 20 ದಿನಗಳ ಹಿಂದೆ ಊರಿನಿಂದ ದುಬೈಗೆ ತೆರಳಿದ್ದ ಇವರು ತೀರಾ ಇತ್ತೀಚೆಗೆ ಹಠಾತ್ ಆಗಿ ಕಾಣಿಸಿಕೊಂಡ ಹೃದಯ ಕಾಯಿಲೆಯ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಭಾನುವಾರಕ್ಕೆ ವಿಮಾನ ಟಿಕೇಟ್ ಖರೀದಿಸಿ ಮತ್ತೆ ಊರಿಗೆ ಮರಳಲು ಸಿದ್ದತೆ ನಡೆಸಿದ್ದರು.
ಆದರೆ ಗುರುವಾರ ರಾತ್ರಿ ಸ್ನೇಹಿತರ ಕೋಣೆಯಲ್ಲಿ ಮಾತನಾಡುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಇವರನ್ನು ಇಲ್ಲಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ ವೇಳೆಗೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರೂ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಮನೆಗೆ ತರುವ ಪ್ರಯತ್ನ ಗುರುವಾರ ರಾತ್ರಿಯಿಂದಲೇ ನಡೆಯುತ್ತಿದೆ.
