ಬಂಟ್ವಾಳ: ಬ್ಯಾಟರಿ ಚಾಲಿತ ಆಟಿಕೆ ಮೊಬೈಲ್ ಸಿಡಿದು ಬಾಲಕನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಚ್ಚಿನದಲ್ಲಿ ಬುಧವಾರ ಸಂಜೆ ನಡೆದಿದೆ.
ಗಾಯಾಳುವನ್ನು ಇಲ್ಲಿನ ನಿವಾಸಿ ಗಿರಿಯಪ್ಪ ಎಂಬವರ ಪುತ್ರ ಗುರುಕಿರಣ್(10) ಎಂದು ಗುರುತಿಸಲಾಗಿದ್ದು, ಈತನು ಮಚ್ಚಿನ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ.

ಈತನು ಶಾಲೆಯಿಂದ ಬುಧವಾರ ಸಂಜೆ ಎಂದಿನಂತೆ ಮನೆಗೆ ಬಂದು ಬ್ಯಾಟರಿ ಚಾಲಿತ ಆಟಿಕೆ ಮೊಬಯಿಲ್‍ನಲ್ಲಿ ಆಟವಾಡುತ್ತಿದ್ದ ವೇಳೆ ಮೊಬೈಲ್ ಏಕಾಏಕಿ ಸ್ಪೋಟಗೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಬಾಲಕನ ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಗಾಯವಾಗಿ ತಕ್ಷಣವೇ ಅವರನ್ನು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಟಿಕೆ ಮೊಬೈಲ್‍ನ್ನು ಈಚೆಗೆ ಬಳ್ಳಮಂಜ ಕ್ಷೇತ್ರದಲ್ಲಿ ನಡೆದ ಷಷ್ಠಿ ಉತ್ಸವದಲ್ಲಿ ಖರೀದಿಸಲಾಗಿತ್ತು ಎಂದು ತಿಳಿದು ಬಂದಿದೆ.
