ಬಂಟ್ವಾಳ: 8 ವರ್ಷಗಳಿಂದ ವಿಧಾನಪರಿಷತ್ತಿಗೆ ಸದಸ್ಯರಾಗಿ ಗ್ರಾಮಪಂಚಾಯತ್ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿರುವ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸಮರ್ಥ ಅಭ್ಯರ್ಥಿಯಾಗಿದ್ದು, ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣೀಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಟ ಶ್ರೀನಿವಾಸ ಪೂಜಾರಿಯವರು ಸಚಿವರಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ರಾಜ್ಯದಾದ್ಯಂತ ಪ್ರವಾಸ ಮಾಡಿ ತಮ್ಮ ಕಾರ್ಯ ವಿಧಾನದಿಂದ ತಮ್ಮ ಕಾರ್ಯಕರ್ತರ ಅಭಿಮಾನಕ್ಕೂ ಪಾತ್ರರಾಗಿದ್ದಾರೆ ಎಂದರು.

ಬಿಜೆಪಿ  ಸರ್ಕಾರ ಅಧಿಕಾರದಲ್ಲಿದ್ದಾಗ ಗ್ರಾಮಪಂಚಾಯತ್ ವಿಧೇಯಕ ಜಾರಿಗೆ ತಂದು ಗ್ರಾಮಪಂಚಾಯತ್ ಸಿಬ್ಬಂದಿಗಳ ನೇಮಕ, ಅಭೀವೃದ್ದಿ ಅಧಿಕಾರಿಗಳ ನೇಮಕದಿಂದ ಗ್ರಾಮಪಂಚಾಯತ್ ಮಟ್ಟದಿಂದ ಗ್ರಾಮೀಣ ಅಭೀವೃದ್ದಿಯ ಹಲವು ಯೋಜನೆಗಳನ್ನು ಮಾಡಿದೆ, ಹಾಗೆಯೇ ರಮೇಶ್ ಕುಮಾರ್ ವರದಿಯ ಮಂಡನೆಗೂ ಬಿಜೆಪಿ ಒತ್ತಾಯ ಮಾಡಿದೆ ಎಂದ ಅವರು, ಯೋಜನೆ ಜಾರಿಯಾಗಿದ್ದರೂ, ಯಾವುದೇ ಅನುದಾನ ಬರುತ್ತಿಲ್ಲ ಇದಕ್ಕೆ ರಾಜ್ಯದ ಕಾಂಗ್ರೇಸ್ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯವೈಖರಿಯಿಂದಾಗಿ ಅವರನ್ನು ಉಡುಪಿ-ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೂರನೇ ಬಾರಿ ಸ್ಪರ್ಧಿಸುವ ಅವಕಾಶವನ್ನು ಪಕ್ಷ ನೀಡಿದೆ, ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಬಹುಮತದಿಂದ ಆಯ್ಕೆಯಾಗುವಂತೆ ಮತದಾರರಿಗೆ ತಿಳಿಸಲಾಗಿದೆ. ಹಾಗೆಯೇ ಕಣದಲ್ಲಿರುವ ಯಾವುದೇ ಇತರ ಅಭ್ಯರ್ಥಿಗಳಿಗೆ ಬಿಜೆಪಿ ಬೆಂಬಲಿತ ಮತದಾರರು ಮತಹಾಕುವ ಪ್ರಮೇಯವೇ ಇಲ್ಲ, ಬಿಜೆಪಿ ಏಕೈಕ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದವರು ತಿಳಿಸಿದರು.
ಬಿಜೆಪಿ ಅಭ್ಯರ್ಥಿ  ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷ ತನ್ನ ಮೇಲೆ ವಿಶ್ವಾಸವಿಟ್ಟು ಮೂರನೇ ಬಾರಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ, ಪ್ರಥಮ ಪ್ರಾಶಸ್ತ್ಯದ ಮತದಾನದಲ್ಲಿಯೇ ಗೆಲ್ಲುವ ವಿಶ್ವಾಸವಿದೆ, ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳ ಧ್ವನಿಯಾಗಿ ಕೆಲಸ ಮಾಡಿದ್ದೇನೆ, ಪಂಚಾಯತ್ ಸದಸ್ಯರನ್ನು ರಾಜ್ಯಮಟ್ಟದಲ್ಲಿ ಸೇರಿಸಿ ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿರುವುದಾಗಿ ತಿಳಿಸಿದರು.
ಇದೇ ವೇಳೆ ಬಂಟ್ವಾಳ ತಾಲೂಕಿನ ಬಿಜೆಪಿ ಬೆಂಬಲಿತ ಗ್ರಾ.ಪಂ, ತಾ.ಪಂ. ಹಾಗೂ ಜಿ.ಪಂ. ಸದಸ್ಯರಿಗೆ ಮತಚಲಾವಣೆ ಕುರಿತಾಗಿ ಪ್ರಾತ್ಯಕ್ಷಿಕೆ ನೀಡಲಾಯಿತು. ಪ್ರಮುಖರಾದ ಮೋನಪ್ಪ ಭಂಡಾರಿ, ಗಣೇಶ್ ಕಾರ್ಣೀಕ್, ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಾರದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ, ಪಕ್ಷದ ಪ್ರಮುಖರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ದೇವದಾಸ್ ಶೆಟ್ಟಿ ರಾಮದಾಸ್ ಬಂಟ್ವಾಳ, ಸುಲೋಚನಾ ಜಿಕೆ ಭಟ್, ದೇವಪ್ಪ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ಪುರುಷ ಎನ್.ಸಾಲ್ಯಾನ್, ಕೃಷ್ಣಪ್ಪ ಪೂಜಾರಿ ದೋಟ, ಹರೀಶ್ ಆಚಾರ್ಯ ರಾಯಿ ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *