ಬಂಟ್ವಾಳ:ಜಿಲ್ಲೆಯ ನೇತ್ರಾವತಿ ನದಿ ಬರಿದುಗೊಳಿಸಿ ಇಲ್ಲಿನ ಜನರನ್ನು ಕಂಗೆಡಿಸಲು ಎತ್ತಿನಹೊಳೆ ಯೋಜನೆ ಮೂಲಕ ಸರ್ಕಾರವು ಜನವಿರೋಧಿ ನೀತಿಗೆ ಮುಂದಾಗಿದೆ. ಇದರಿಂದಾಗಿ ಅವಿಭಜಿತ ಜಿಲ್ಲೆಯ ಜನಪ್ರತಿನಿಧಿಗಳು ಈ ಹೋರಾಟ ಬಗ್ಗೆ ಧ್ವನಿಗೂಡಿಸುತ್ತಿಲ್ಲ ಎಂದು ಜಿಲ್ಲಾ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ ಪ್ರಧಾನ ಸಂಚಾಲಕ ಡಾ. ನಿರಂಜನ ರೈ ಆರೋಪಿಸಿದ್ದಾರೆ.

1 (4)

15btl-Mutthige
ತಾಲ್ಲೂಕಿನ ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧ ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ತಾಲ್ಲೂಕು ಕಚೇರಿ ಮುತ್ತಿಗೆ ಮತ್ತು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ವಾರ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಸತ್ನಲ್ಲಿ ಈ ಯೋಜನೆ ಬಗ್ಗೆ ಪ್ರಸ್ತಾವಿಸಿ ವಿರೋಧ ದಾಖಲಿಸಿರುವುದು ಅಭಿನಂದನೀಯ.

ಇದೇ 18ರಂದು ಕೇಂದ್ರ ಸರ್ಕಾರ ಕರೆದಿರುವ ಮಹತ್ವದ ಸಭೆಯಲ್ಲಿ ಈ ಬಗ್ಗೆ ಮತ್ತೆ ಧ್ವನಿಯೆತ್ತಿ ಯೋಜನೆಗೆ ಅನುಮತಿ ನೀಡದಂತೆ ಅವರು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು. ಎತ್ತಿನಹೊಳೆ ಯೋಜನೆ ಕೇವಲ ಹಣ ಮಾಡುವ ಯೋಜನೆಯಾಗಿದ್ದು, ಪಶ್ಚಿಮ ಘಟ್ಟದ ಪ್ರಾಣಿ ಸಂಕುಲ ಸಂಪೂರ್ಣ ನಾಶವಾಗುವುದರ ಜೊತೆಗೆ ಮಾನವ ಕುಲಕ್ಕೂ ಭಾರೀ ಅಪಾಯ ಕಾದಿದೆ ಎಂದರು.
ಸಹ್ಯಾದ್ರಿ ಸಂಚಯನ ವೇದಿಕೆ ಸಂಚಾಲಕ ದಿನೇಶ್ ಹೊಳ್ಳ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಜನತೆಯ ಬಗ್ಗೆ ನೈಜ ಕಾಳಜಿ ಇಲ್ಲ ಎಂಬುದು ಈ ಯೋಜನೆಯಿಂದ ಸಾಬೀತಾಗಿದೆ. ಕೇವಲ ಓಟಿಗೆ ಮತ್ತು ನೋಟಿಗಾಗಿ ಕರಾವಳಿ ಜನರನ್ನು ವಂಚಿಸಿ ನೇತ್ರಾವತಿ ನದಿಯನ್ನು ಬಲಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಸಹ್ಯಾದ್ರಿ ಸಂಚಯನ ವೇದಿಕೆ ಸದಸ್ಯ ಶಶಿಧರ ಶೆಟ್ಟಿ ಮಾತನಾಡಿ, ಎತ್ತಿನ ಹೊಳೆ ಯೋಜನೆ ಬಳಿಕ ಪಶ್ಚಿಮ ಘಟ್ಟ ನಾಶಕ್ಕೆ ಇಂತಹ ಹಲವು ಯೋಜನೆಗಳು ಬರುವ ಸಾಧ್ಯತೆಯಿದ್ದು, ಇದನ್ನು ತಡೆಯಲು ಕುದುರೆಮುಖದಿಂದ ವಿಶ್ವಗಿರಿತನಕ ‘ನೇತ್ರಾವತಿ ನದಿ ಸಂರಕ್ಷಣಾ ವಲಯ’ ಎಂದು ಘೋಷಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಾಮಾಜಿಕ ನ್ಯಾಯ ಪರ ಸಮಿತಿ ಗೌರವಾಧ್ಯಕ್ಷ ಲೋಕೇಶ ಶಾಂತಿ ಎಂ.ಕೆ., ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ, ಸಂಚಾಲಕ ಪ್ರಭಾಕರ ದೈವಗುಡ್ಡೆ, ಪ್ರಮುಖರಾದ ಕೈಲಾರು ರಾಜಗೋಪಾಲ ಭಟ್ ಉಪ್ಪಿನಂಗಡಿ, ರಹೀಂ ಉಚ್ಚಿಲ್, ಪಿ.ಎ.ರಹೀಂ, ಕೆ.ಎಚ್. ಅಬೂಬಕ್ಕರ್, ಇಬ್ರಾಹಿಂ ಕೈಲಾರ್, ರಾಜಾ ಚೆಂಡ್ತಿಮಾರ್, ಹುಸೈನ್ ಪರ್ಲಿಯ, ಹರೀಶ್ ಪೆರಾಜೆ, ಅಯುಬ್ ಜಿ.ಕೆ., ಶರೀಫ್ ಪರ್ಲಿಯಾ, ರಾಮಚಂದ್ರ ಸುವರ್ಣ, ಸರಪಾಡಿ ಅಶೋಕ ಶೆಟ್ಟಿ, ಮುನ್ನಲಾಯಗುತ್ತು ದಯಾನಂದ ಶೆಟ್ಟಿ, ಮಚ್ಚೇಂದ್ರ ಸಾಲಿಯಾನ್, ಸೋಮಪ್ಪ ಕೋಟ್ಯಾನ್ ತುಂಬೆ, ಸುಧಾಕರ ಸಾಲ್ಯಾನ್, ವಿಶ್ವನಾಥ ಬಿ.ಸಿ.ರೋಡು ಮತ್ತಿತರರು ಇದ್ದರು.
ವಿದ್ಯಾರ್ಥಿಗಳಿಗೆ ಶಿಕ್ಷೆ:
ಎತ್ತಿನಹೊಳೆ ಯೋಜನೆ ವಿರುದ್ಧ ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸ್ಥಳೀಯ ಖಾಸಗಿ ಪದವಿ ಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿಗಳನ್ನು ಮರಳಿ ತರಗತಿಗೆ ಪ್ರವೇಶಿಸಲು ಅಲ್ಲಿನ ಪ್ರಾಂಶುಪಾಲರು ನಿರಾಕರಿಸಿದ ಪ್ರಸಂಗ ನಡೆಯಿತು. ಇದೇ ವೇಳೆ ಹೋರಾಟ ಸಮಿತಿ ಸದಸ್ಯರು ಧಾವಿಸಿ ಮಾತುಕತೆ ನಡೆಸಿದ ಬಳಿಕ ವಿವಾದ ಸುಖಾಂತ್ಯಗೊಂಡಿತು.

 

By suddi9

Leave a Reply

Your email address will not be published. Required fields are marked *