ಚೆನ್ನೈ ಮಳೆಪ್ರಳಯಕ್ಕೆ ನಮ್ಮ ಕರಾವಳಿಗರು ಕೂಡಾ ಸಿಲುಕಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಲವಾರು ವರ್ಷಗಳಿಂದ ಚೆನ್ನೈಯ ಸಿ.ಎಂ.ಬಿ.ಟಿ. ಬಸ್ ನಿಲ್ದಾಣ ಬಳಿಯ ಚೂಳೈಮೇಡು ಎಂಬಲ್ಲಿ ಸ್ವಂತ ಮನೆ ಮಾಡಿ ವಾಸಿಸುತ್ತಿರುವ 9 ಮಂದಿ ಸದಸ್ಯರಿರುವ ಕನ್ನಡಿಗ ಕುಟುಂಬ ಚೆನ್ನೈ ಪ್ರಳಯಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ.

 ಚೆನ್ನೈಯಲ್ಲಿರುವ ಹರೀಶ್, ಅಪರ್ಣಾ ಮತ್ತು ಮಗ ಅನೀಶ್.

PicsArt_12-03-01.56.33

ಇವರಿಗೆ ಚೆನ್ನೈ ನಗರದ ಚೂಳೈಮೇಡು ನಲ್ಲಿ ಒಂದು ಹಂತಸ್ತಿನ ಸ್ವಂತ ಮನೆಯಿದೆ. ಒಂದೇ ಮನೆಯಲ್ಲಿ ಮೂವರು ದಂಪತಿಗಳು, ಮೂವರು ಮಕ್ಕಳು ಸೇರಿದಂತೆ 9 ಮಂದಿ ಇದ್ದಾರೆ. ಇದರಲ್ಲಿ 8 ಮಂದಿ ವಿಟ್ಲದವರಾದರೆ ಮತ್ತೋರ್ವೆ ಉಡುಪಿಯಿಂದ ವಿಟ್ಲಕ್ಕೆ ಬಂದ ಸೊಸೆ.

ವಿಟ್ಲ ಅಡ್ಡದಬೀದಿಯ ರತ್ನಾಕರ ಜೋಷಿ, ಅವರ ಪತ್ನಿ ವಿಜಯ, ದೊಡ್ಡ ಮಗ ಸುರೇಶ, ಪತ್ನಿ ಮೂಲತಃ ಉಡುಪಿಯ ವಾಣಿ, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳಾದ ದುರ್ಗೇಶ್, ನವ್ಯಾ, ರತ್ನಾಕರ ಜೋಷಿ-ವಿಜಯ ದಂಪತಿಯ ಸಣ್ಣ ಮಗ ಚೆನ್ನೈಯಲ್ಲಿ ಎಂಜಿನಿಯರ್ ಆಗಿರುವ ಹರೀಶ್ ಅವರ ಪತ್ನಿ ಚೆನ್ನೈ ಆಲ್ ಇಂಡಿಯಾ ರೇಡಿಯೋ ಎಫ್.ಎಂ. ಗೋಲ್ಡ್ 102.3 ಕನ್ನಡ ಚಾನಲ್ ನಲ್ಲಿ ವೃತ್ತಿಯಲ್ಲಿರುವ ಅಪರ್ಣಾ, ಮಗ ಎಲ್.ಕೆ.ಜಿ. ವಿದ್ಯಾರ್ಥಿ ಅನೀಶ್ ಅವರು ಮಹಾಮಳೆಗೆ ಸಿಲುಕಿರುವ ನತದೃಷ್ಟರು. ಅಪರ್ಣಾ ಚೆನ್ನೈ ಯಲ್ಲಿ ಕನ್ನಡದ ನಡೆ ನುಡಿಗಾಗಿ ದುಡಿಯುತ್ತಿದ್ದಾರೆ. ಅವರು ವಿಟ್ಲ ಪಳಿಕೆ ನಿವಾಸಿ ಸಾಹಿತಿ ಶಂಕರ ಕುಳಮರ್ವ ಹಾಗೂ ವಿಟ್ಲ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷೆ ಶಾಂತಾ ಎಸ್.ಎನ್. ಭಟ್ ದಂಪತಿ ಪುತ್ರಿ.

ಮನೆಯ ನೆಲಮಹಡಿ ಸಂಪೂರ್ಣ ಜಲಾವೃತವಾಗಿದ್ದು, ಎಲ್ಲರೂ ಕಳೆದ ಮೂರ್ನಾಲ್ಕು ದಿನಗಳಿಂದ ಮೇಲಿನ ಮಹಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದು 3 ನೇ ಬಾರಿ ಈ ಮನೆಗೆ ನೀರು ಬಂದಿದೆ. ಕಳೆದ 1 ತಿಂಗಳಿಂದ 2 ಬಾರಿ ನೀರು ಬಂದು ಹೋಗಿತ್ತು. ಮನೆಯ ಅಂಗಳದಲ್ಲಿರುವ ಕಾರು, ಬೈಕ್ ಮುಳುಗಿಹೋಗಿದೆ. ವಿದ್ಯುತ್ ಸಂಪರ್ಕವಿಲ್ಲ. ಮೊಬೈಲ್ ನೆಟ್ ವರ್ಕ್ ಇಲ್ಲ. ಕುಡಿಯುವ ನೀರಿಗೂ ತತ್ವಾರ. ಆಹಾರಕ್ಕೆ ಹಾಹಾಕಾರ. ಮನೆಯಲ್ಲಿ ಶೇಖರಿಸಿಟ್ಟ ಅಲ್ಪಸ್ವಲ್ಪ ಬೇಲೆಕಾಳುಗಳೇ ಹೊಟ್ಟೆ ತುಂಬಿಸುತ್ತೆ. ಸುತ್ತಲೂ ನೀರು ತುಂಬಿ ದ್ವೀಪದಲ್ಲಿರುವ ಅನುಭವ. ಇಂದಿನಿಂದ ಆಗೊಮ್ಮೆ ಈಗೊಮ್ಮೆ ಸಿಗುವ ಮೊಬೈಲ್ ನೆಟ್ ವರ್ಕ್ ನಿಂದ ಇಂದು (03/12) ಬೆಳಿಗ್ಗೆ ಮನೆಗೆ ಫೋನ್ ಮಾಡಿ ಒಂದರ್ಧ ನಿಮಿಷ ಅಪರ್ಣಾ ಅಮ್ಮನಲ್ಲಿ ಮಾತನಾಡಿದ್ದಾರೆ. ಕರೆಂಟಿಲ್ಲದ ಕಾರಣ ಮೊಬೈಲ್ ಚಾರ್ಜ್ ಅಭಾವ. ಮೊನ್ನೆ ಚಾರ್ಜ್ ಮಾಡಿದ ಮೊಬೈಲ್ ಪವರ್ ಬ್ಯಾಂಕ್ ಕೂಡಾ ಬರಿದಾಗಿದೆ. ಅಕ್ಷರಶಃ ಯಾರದೇ ಸಂಪರ್ಕವಿಲ್ಲದೆ ಮೋಡ ಕವಿದ ವಾತಾವರಣದಲ್ಲಿ ಭಯದೊಂದಿಗೆ ಜೀವಿಸಬೇಕಾದ ಅಸಹನೀಯ ಅನುಭವ ಈ ಕನ್ನಡಿಗ ಕುಟುಂಬದ್ದು.

ಅರ್ಧ ಲೀಟರ್ ಹಾಲಿಗೆ 100 ರೂ:- ಹರೀಶ್ ಇಂದು ಬೆಳಿಗ್ಗೆ ಪ್ರಳಯದ ನೀರಲ್ಲಿ ಈಜಿ ಒಂದು ಕಿ.ಮೀ. ದೂರದ  ಅಂಗಡಿಗೆ ತೆರಳಿ ಹಾಲು ತಂದಿದ್ದಾರೆ. ಹಾಲಿಗಾಗಿ ಅಲ್ಲಿ ದೊಡ್ಡ ಜನಸಂದಣಿಯೇ ಇದೆ. ಅರ್ಧ ಲೀಟರ್ ನ ಒಂದು ಪ್ಯಾಕೆಟ್ ಹಾಲಿಗೆ ನೂರು ರೂ. ಅದಕ್ಕೂ ನೂಕುನುಗ್ಗಲು. ಸ್ವಲ್ಪ ತಡವರಿಸಿದರೂ ಅದೂ ಕೂಡಾ ಇಲ್ಲ. ಹಾಗಾದರೆ ಇನ್ನಿತರ ವಿಷಯಗಳು ಹೇಗಿದ್ದಿರಬಹುದೆಂದು ಊಹಿಸಿನೋಡಿ. ಒಟ್ಟಿನಲ್ಲಿ ಈ ಕನ್ನಡಿಗ ಕುಟುಂಬ ಅಲ್ಲಿ ನಿಲ್ಲಲೂ ಆಗದೆ ಎಲ್ಲೂ ಹೋಗಲೂ ಆಗದೆ ಒದ್ದಾಡುತ್ತಿದೆ. ಈಜಿಕೊಂಡು ಊರಿಗೆ ಬರೋಣವೆಂದರೆ ವಾಹನ, ರೈಲಿನ ಸಂಪರ್ಕ ಕೂಡಾ ಇಲ್ಲ. ಇದೀಗ ಬಂದ ಸುದ್ದಿ ಪ್ರಕಾರ ಮೋಡಕವಿದ ವಾತಾವರಣದಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗಿದೆ.

ಅಮೀನ್ ಗೆ ಮಾಳಿಗೆ ಮೇಲಿನ ಜೀವನ:-
ಚೆನ್ನೈ ಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವ್ಯಾಸಂಗ ಮಾಡುತ್ತಿರುವ ಪೆರ್ಲ ಸಮೀಪದ ಗೂಣಾಜೆ ನಿವಾಸಿ ಮೊಯ್ದು ಹಾಜಿ ಹಾಗೂ ಝುಬೈದಾ ದಂಪತಿ ಪುತ್ರ ಅಮೀನ್ ಮಾಳಿಗೆ ಮೇಲಿನ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಕೆಳಗಿಲಿಯಲು ನೀರು ಬಿಡುತ್ತಿಲ್ಲ. ಚೆನ್ನೈ ತೌಸೆಂಡ್ ಲೈಟ್, ಮೌಂಟ್ ರೋಡ್ ನಲ್ಲಿನ 2 ನೇ ಮಹಡಿಯ ಕೋಣೆಯಲ್ಲಿರುವ ಅಮೀನ್ ಗೆ ಆಹಾರಕ್ಕೆ ತತ್ವಾರ. ಸುತ್ತಮುತ್ತ ತೆರೆಯುವ ಒಂದೆರಡು ಹೋಟೆಲ್ ನಲ್ಲಿ ಇರುವುದು ದುಬಾರಿ ಫುಡ್. ತಿನ್ನೋಕೂ ಅಲ್ಲ. ತಿನ್ನದಿರೋಕೂ ಅಲ್ಲ ಅನ್ನುವ ಪರಿಸ್ಥಿತಿ ಎದುರಾಗಿದೆ.

ವರದಿ; ರಶೀದ್ ವಿಟ್ಲ.

By suddi9

Leave a Reply

Your email address will not be published. Required fields are marked *