ಬಂಟ್ವಾಳ: ಒಳ್ಳೆಯ ಮನಸ್ಸುಗಳು ಒಟ್ಟು ಸೇರಿದಾಗ ದೈವೀ ಕಾರ್ಯದಂತಹ ಒಳ್ಳೆಯ ಕೆಲಸಗಳನ್ನು ಆದಷ್ಟು ಬೇಗ ಮಾಡಿ ಮುಗಿಸ ಬಹುದು ಎಂದು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು.
ಸಜೀಪಮುನ್ನೂರು ಗ್ರಾಮದ ಮುದೆಲ್ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ಜೀಣೋದ್ದಾರದ ಅಂಗವಾಗಿ ಜುಮಾದಿಪಾಲುವಿನಲ್ಲಿ ನೂತನ ಶಿಲಾಮಯವಾಗಿ ನಿರ್ಮಾಣಗೊಳ್ಳಲಿರುವ ಜುಮಾದಿಬಂಟ ಮಹಿಷಂದಾಯ ದೈವಸ್ಥಾನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯ ಜಗನ್ನಾಥ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಸನಿಹವೇ ದೈವೀ ಶಕ್ತಿ ಕೇಂದ್ರಗಳು ಇರುತ್ತದೆ. ಅದನ್ನು ಆರಾಧಿಸಬೇಕು ಎನ್ನುವ ಅರಿವು ನಮ್ಮಲ್ಲಿ ಮೂಡಿದಾಗ ಆ ಕ್ಷೇತ್ರವು ಹೆಚ್ಚು ಪಾವಿತ್ರ್ಯತೆಯಿಂದ ಕೂಡಿ ಶ್ರದ್ದಾ ಭಕ್ತಿಯ ಕೇಂದ್ರವಾಗಿ ಮೂಡಿಬರಲು ಸಾಧ್ಯ ಎಂದರು.
ತಾಲೂಕು ಆರಾಧನ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಪರಾರಿಗುತ್ತು ಕೋಟಿಮಾರ್ತ ಯಾನೆ ಮಂಜುನಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀಣೋದ್ದಾರ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಜೀಣೋದ್ದಾರಗೊಳ್ಳುತ್ತಿರುವ ಕ್ಷೇತ್ರದ ಅಭಿವೃದ್ದಿಗೆ ಗ್ರಾಮಸ್ಥರೆಲ್ಲರ ಸಹಕಾರ ಅಗತ್ಯ ಎಂದರು. ಎಂ.ಸುಬ್ರಹ್ಮಣ್ಯ ಭಟ್ ವಂದಿಸಿದರು. ದಿನೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ಪರಮೇಶ್ವರ ಎಂ., ಜಯಶಂಕರ ಬಾಸ್ತ್ರಿತ್ತಾಯ, ಎಂಟು ಗುತ್ತಿನ ಮನೆಯವರು ಹಾಗೂ ಸೇವಾಕರ್ತರು ಉಪಸ್ಥಿತರಿದ್ದರು.


