ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಡು ನುಡಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ಹಾಗೂ ಪುತ್ತಿಗೆಪದವಿನ ವಿವೇಕಾನಂದ ನಗರ ಸಜ್ಜುಗೊಳ್ಳುತ್ತಿದೆ. ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನವಾದ ನುಡಿಸಿರಿಯು ಇಂದಿನಿಂದ ಮೊದಲ್ಗೊಂಡು ನಾಲ್ಕುದಿನಗಳ ನಡೆಯಲಿದೆ.

ಸಿಂಗಾರಗೊಂಡ ವೇದಿಕೆಗಳು: ವಿವೇಕಾನಂದ ನಗರದ ಬೃಹತ್ ವೇದಿಕೆ ನುಡಿಸಿರಿಯ ಉದ್ಘಾಟನಾ ಸಮಾರಂಭವನ್ನು ಇದಿರು ನೋಡುತ್ತಿದೆ. 150 ಅಡಿ ಉದ್ದ 40 ಅಡಿ ಅಗಲದ ಬೃಹತ್ ವೇದಿಕೆ ಇದಾಗಿದ್ದು, ಸುಮಾರು 30 ಸಾವಿರ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ರತ್ನಾಕರವರ್ಣಿ ವೇದಿಕೆಯಲ್ಲಿ ಸಾಹಿತ್ಯ, ಸಂಸ್ಕ್ರತಿ, ಸಮಾಜ, ನೆಲ-ಜಲಗಳ ಕುರಿತು ಚಿಂತನ-ಮಂಥನ ಹಾಗೂ ನುಡಿಸಿರಿಯ ಮೊದಲ ದಿನ ವಿದ್ಯಾರ್ಥಿಸಿರಿ ನಡೆಯಲಿದೆ. ಸಂಜೆಯಿಂದ ಎಂಟು ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು.
ರತ್ನಾಕರವರ್ಣಿ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆ, ಬಿ.ವಿ.ಕಾರಂತ ವೇದಿಕೆ, ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ, ಕೆ.ಎನ್.ಟೈಲರ್ ವೇದಿಕೆ, ಮಾ| ವಿಠಲ ಶೆಟ್ಟಿ ವೇದಿಕೆ ಮತ್ತು ಕು.ಶಿ.ಹರಿದಾಸ ಭಟ್ಟ ವೇದಿಕೆಗಳಲ್ಲಿ ಸಮ್ಮೇಳನದ ಮೂರು ದಿನಗಳ ಕಾಲವೂ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿವೆ.
ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ 700 ವಿಶೇಷ ಸಾಧಕರ ಆಯ್ಕೆ: ಆಳ್ವಾಸ್ ನುಡಿಸಿರಿ 2015ರ ಸಮ್ಮೇಳನಕ್ಕೆ ಈ ಬಾರಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 700 ಕ್ಕಿಂತಲೂ ಅಧಿಕ ಸಾಧಕರನ್ನು ವಿಶೇಷ ಅಹ್ವಾನಿತರಾಗಿ ಆಮಂತ್ರಿಸಲಾಗಿದೆ. ಇವರೆಲ್ಲರೂ ನಾಲ್ಕು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನಕ್ಕೆ ಗೌರವವನ್ನು ತಂದುಕೊಡಲಿದ್ದಾರೆ.
ಕೃಷಿಸಿರಿ ಮತ್ತು ವಿದ್ಯಾರ್ಥಿಸಿರಿ
ನುಡಿಸಿರಿಯ ಜೊತೆಜೊತೆಗೆ ಕೃಷಿಸಿರಿ ಮತ್ತು ವಿದ್ಯಾರ್ಥಿಸಿರಿ ಕಾರ್ಯಕ್ರಮವೂ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕ್ರತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ 2015’ ಸಮ್ಮೇಳನವು ಇಂದು ಬೆಳಿಗ್ಗೆ 9.30ಕ್ಕೆ ನಡೆಯಲಿದ್ದು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸಲಿದ್ದಾರೆ. ಕು. ಶಾಲಿಕಾ ಎಕ್ಕಾರು ಸಮ್ಮೇಳನಾಧ್ಯಕ್ಷೆಯನ್ನು ವಹಿಸಲಿದ್ದಾರೆ ಈ ಸಂದರ್ಭದಲ್ಲಿ ಮೂವರು ಸಾಧಕರಿಗೆ ‘ಆಳ್ವಾಸ್ ವಿದ್ಯಾರ್ಥಿ ಸಿರಿ ಪ್ರಶಸ್ತಿ’ ನೀಡಿ ಗೌರವಿಸುವುದರ ಜತೆಗೆ ಈ ಬಾರಿಯ ರಾಷ್ಟ್ರ ಪ್ರಶಸ್ತಿ ವಿಜೇತೆ ಬಾಲ ಕಲಾವಿದೆ ಮೂಡುಬಿದಿರೆಯ ಪಂಚಮಿ ಮಾರೂರನ್ನು ಗೌರವಿಸಲಾಗುವುದು.
ಸಮ್ಮೇಳನದಲ್ಲಿ ವಿದ್ಯಾರ್ಥಿ ವಿಶೇಷೋಪನ್ಯಾಸದಲ್ಲಿ ಶ್ರದ್ಧಾ ಎನ್ ಪೈವಳಿಕೆ ‘ಕನ್ನಡ ಹಾಡುಗಬ್ಬ’ ಎಂಬ ವಿಷಯದಲ್ಲಿ, ಸೌಮ್ಯ ಸರಗಣಾಚಾರಿ ಗುಲ್ಬರ್ಗಾ ಇವರು ‘ಯುವಜನತೆ ಮತ್ತು ಭಾರತ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಹಿರಿಯರಿಂದ ವಿಶೇಷೋಪನ್ಯಾಸದಲ್ಲಿ ಮಕ್ಕಳ ಸಾಹಿತಿ ಟಿ.ಎಸ್ ನಾಗರಾಜ ಶೆಟ್ಟಿ ತಿಪಟೂರು ಹಾಗೂ ರಾಷ್ಟ್ರೀಯ ತರಬೇತುದಾರ ಶಿಕ್ಷಕ ರಾಜೇಂದ್ರ ಭಟ್ ಕೆ ಉಪನ್ಯಾಸ ನೀಡಲಿದ್ದಾರೆ. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಕೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಆಯ್ದ ವಿದ್ಯಾರ್ಥಿ ಕವಿಗಳು ಭಾಗವಹಿಸಲಿದ್ದಾರೆ.
ಹಾಗೂ ಕೃಷಿಸಿರಿ ಸಮ್ಮೇಳನವೂ ನಡೆಯಲಿದ್ದು ಅದರಲ್ಲಿ ಕೃಷಿಗೆ ಸಂಬಂಧಿಸಿದ ಮಳಿಗೆಗಳು ಮತ್ತು ಕೃಷಿ ಪರಿಕರಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ.
ಆಳ್ವಾಸ್ ಸಂಸ್ಥೆಯಲ್ಲಿ ದುಡಿಯುತ್ತಿರುವ ಸಿಬಂದಿಗಳು ಆಳ್ವಾಸ್ ನುಡಿಸಿರಿಗೆ ಸಂಬಂಧಪಟ್ಟಂತೆ ಪ್ರತಿನಿಧಿಗಳ ನೋದಾವಣೆ, ಆಮಂತ್ರಣ ಪತ್ರಿಕೆಗಳ ವಿತರಣೆ (ಅಂಚೆಯಲ್ಲಿ), ಮಳಿಗೆಗಳ ನೋದಾವಣೆ, ಸಹಿತ ಇತರ ಹಲವು ಕೆಲಸಗಳನ್ನು ಕಳೆದ ಮೂರು ತಿಂಗಳಿನಿಂದ ತಯಾರಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ.







