ಮಂಗಳೂರು: ಓರ್ವ ಉತ್ತಮ ವಾಕ್ಪಟುವಾಗಿ ಹೊರಹೊಮ್ಮಬೇಕಾದರೆ ಸೃಜನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಅವುಗಳನ್ನು ಸ್ಪಷ್ಟ ಮತ್ತು ದಿಟ್ಟವಾಗಿ ಅಭಿವ್ಯಕ್ತಿಗೊಳಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕಾದುದು ಅತ್ಯಗತ್ಯ ಎಂದು ಕಾಲೇಜ್ ಫಾರ್ ಲೀಡರ್ಶಿಪ್ ಎಂಡ್ ಹ್ಯೂಮನ್ ರಿಸೋರ್ಸ್ ಡೆಮೆಲಪ್ಮೆಂಟ್ ಸಂಸ್ಥೆಯ ನಿರ್ದೇಶಕ ಸನ್ನಿ ತಾರಪ್ಪನ್ ಹೇಳಿದರು.
Lighting_Lamp

Palaniyappa_Subramaniam

Sunney_Tharappan

ನಗರದ ನವಭಾರತ ವೃತ್ತದ ಬಳಿ ಇರುವ ಹೋಟೆಲ್ ಓಷಿಯನ್ ಪಾರ್ಲರ್ನಲ್ಲಿ ನ. 21ರಂದು ಶನಿವಾರ ಆರಂಭಗೊಂಡ ಟೋಸ್ಟ್ ಮಾಸ್ಟರ್ ಜಿಲ್ಲೆ 92, ಇದರ ಎರಡು ದಿನಗಳ ಅರ್ಧ ವಾರ್ಷಿಕ ಸಮಾವೇಶ ‘ಜಂಬೋರೀ- 15’ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟೋಸ್ಟ್ ಮಾಸ್ಟರ್ ಇಂಟರ್ನ್ಯಾಶನಲ್ ಎಂಬುದು ಅಂತರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಸಂಸ್ಥೆಯಾಗಿದ್ದು, ತನ್ನ ಸದಸ್ಯರಿಗೆ ಸಂವಹನ ಮತ್ತು ನಾಯಕತ್ವ ಬೆಳವಣಿಗೆಯಲ್ಲಿ ತರಬೇತಿ ನೀಡುತ್ತದೆ.

ಟೋಸ್ಟ್ ಮಾಸ್ಟರ್ ಜಿಲ್ಲೆ 92 ಕರ್ನಾಟಕ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯನ್ನು ಹೊಂದಿರುವ ಘಟಕವಾಗಿದ್ದು, ಈ ಜಿಲ್ಲೆಗೆ ಸಂಲಗ್ನಗೊಂಡಿರುವ 147 ಟೋಸ್ಟ್ ಮಾಸ್ಟರ್ ಕ್ಲಬ್ಗಳ 400 ಮಂದಿ ಆಯ್ದ ಪ್ರತಿನಿಧಿಗಳು ಮಂಗಳೂರಿನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ದಿ ಟೋಸ್ಟ್ ಮಾಸ್ಟರ್ ಮಂಗಳೂರು ಘಟಕವು ಈ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಅರ್ಧವಾರ್ಷಿಕ ಸಮಾವೇಶದ ಅಂಗವಾಗಿ ಎರಡು ದಿನಗಳ ಕಾಲ ಶೈಕ್ಷಣಿಕ ಗೋಷ್ಟಿಗಳು, ಭಾಷಣ ಸ್ಪರ್ಧೆ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ತಮ್ಮ ಭಾಷಣದಲ್ಲಿ ಸಾರ್ವಜನಿಕ ಸಂವಹನ ಕಲೆಯ ಕುರಿತು ವಿವರಿಸಿ ಹೇಳಿದ ಅವರು ಉತ್ತಮ ವಾಕ್ಪಟುವಾಗಲು ಬಯಸುವವರು ಮೊದಲು ತಮ್ಮ ವಿಚಾರಗಳ ಕುರಿತು ಸ್ಪಷ್ಟತೆಯನ್ನು ಹೊಂದಿರಬೇಕು ಮತ್ತು ಈ ವಿಚಾರಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಗೊಳಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ, ಧೈರ್ಯದಿಂದ ಸಂವಹನ ನಡೆಸಿದರೆ, ನಮ್ಮ ಮಾತುಗಳಲ್ಲಿ ಸ್ಪಷ್ಟತೆ, ನಿಖರತೆ ಮತ್ತು ಪ್ರಖರತೆ ಬರುತ್ತದೆ, ಸಾರ್ವಜನಿಕ ಸಂವಹನ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುವುದು ಎಂದರು.

ಭಾಷಣದ ವಿಷಯ ಮತ್ತು ವಿನ್ಯಾಸ ಸಾರ್ವಜನಿಕ ಸಂವಹನದ ಬಹುಮುಖ್ಯ ಅಂಶಗಳು. ಸಾರ್ವಜನಿಕರ ಮೇಲೆ ಬರಹಕ್ಕಿಂತ ಹೆಚ್ಚಿನ ಪ್ರಭಾವವನ್ನು ಭಾಷಣ ಬೀರುತ್ತದೆ. ಹೀಗಾಗಿ, ನಮ್ಮ ಚಿಂತನೆಗಳನ್ನು ಜನರಿಗೆ ಮನದಟ್ಟು ಮಾಡಿ ಕೊಡಲು ಭಾಷಣಕ್ಕಿಂತ ಉತ್ತಮವಾದ ಮಾಧ್ಯಮ ಬೇರೊಂದಿಲ್ಲ. ಓರ್ವ ವಾಕ್ಪಟುವಿನ ಸೃಜನಾತ್ಮಕ ಚಿಂತನೆಯ ರಚನಾತ್ಮಕ ಅಭಿವ್ಯಕ್ತಿ ಉತ್ತಮ ಭಾಷಣದ ಸ್ವರೂಪ ಪಡೆದುಕೊಳ್ಳುತ್ತದೆ.

ಆದರೆ, ಭಾಷಣಕಾರರು ತಮ್ಮನ್ನು ಆಲಿಸಲು ಸಮಯ ಕೋಡುವ ಶ್ರೋತೃಗಳನ್ನು ಗೌರವ ಭಾವದಿಂದ ನೋಡಬೇಕು. ಆಗ ಮಾತ್ರ ಭಾಷಣಕಾರನು ಶ್ರೋತೃಗಳ ಜೊತೆಯಲ್ಲಿ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡು ತನ್ನ ವಾಕದ ಪ್ರತಿಭೆಯನ್ನು ಸರಿಯಾಗಿ ಹೊರಹೊಮ್ಮಿಸಲು ಸಾಧ್ಯ. ಜಗತ್ತಿನಾದ್ಯಂತ ಬೌದ್ಧಿಕ ಕ್ರಾಂತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಸಂವಹನ ಕಲೆ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ, ಎಂದು ಅವರು ಹೇಳಿದರು.

2012ರಲ್ಲಿ ನಡೆದ ಸಾರ್ವಜನಿಕ ಸಂವಹನದ ಜಾಗತಿಕ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನದ ವಿಜೇತ ಪಳನಿಯಪ್ಪ ಸುಬ್ರಹ್ಮಣ್ಯಂ ಅವರು ದಿಕ್ಸೂಚಿ ಭಾಷಣವನ್ನು ಮಾಡಿ, ಭಾಷಣಕಾರನಾಗಲು ಬಯಸುವವನು ಅತಿಯಾದ ನಿರೀಕ್ಷೆಗಳನ್ನು ಹೊಂದಿರಬಾರದು. ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಆದರೆ, ನಮ್ಮ ನಿರೀಕ್ಷೆಗಳನ್ನು ನಿಯಮಿತಗೊಳಿಸಿ ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆದರೆ, ನಿರೀಕ್ಷಿತ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು.

ವಿಭಾಗೀಯ ಗವರ್ನರ್ ಟಿ. ಕೆ. ರಮೇಶ್ ಅವರು ಅಂತರಾಷ್ಟ್ರೀಯ ನಿರ್ದೇಶಕರಾಗಿ ಆಯ್ಕೆಯಾಗಿರುವ ಮಾಜಿ ಜಿಲ್ಲಾ ಗವರ್ನರ್ ನಾಗರಾಜ ಅವರನ್ನು ಸನ್ಮಾನಿಸಿದರು. ದಿ ಟೋಸ್ಟ್ ಮಾಸ್ಟರ್ ಚಳವಳಿಯ ಬೆಳವಣಿಗೆಯಲ್ಲಿ ಗಣನೀಯ ಪಾತ್ರ ವಹಿಸಿದ ಸದಸ್ಯರುಗಳನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಲಾ ಪ್ರದರ್ಶನ ಮತ್ತು ನೃತ್ಯ ಸಂಯೋಜನೆ ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಮೆರುಗು ನೀಡಿತು. ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಅನಿತಾ ಕೊರ್ಡೆರೊ ಸ್ವಾಗತಿಸಿದರು. ಮಾಲಿನಿ ಹೆಬ್ಬಾರ್ ಮತ್ತು ತಂಗಮ್ಮ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *