ಬಂಟ್ವಾಳ: ಬೆಂಜನಪದವು ನಗರ ಪ್ರದೇಶಕ್ಕಿಂತ ಹೊರವಲಯದಲ್ಲಿದ್ದರೂ ಇಲ್ಲಿ ನಡೆಸಲಾದ ಮಂಗಳೂರು ಉದ್ಯೋಗ ಮೇಳ ಶಿಸ್ತುಬದ್ದವಾಗಿ ಹಾಗೂ ಲಯಬದ್ದವಾಗಿ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಬೆಂಜನಪದವಿನ ಕೆನರಾ ಇಂಜಿನಿರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳೂರು ಉದ್ಯೋಗಮೇಳದ ಯಶಸ್ಸಿನ ಕುರಿತು ಕಾರ್ಯಕ್ರಮದ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸಾಕಷ್ಟು ಕಂಪೆನಿಗಳು ಭಾಗವಹಸಿದ್ದು ಅದರ ಮುಖ್ಯಸ್ಥರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಉದ್ಯೋಗ ಮತ್ತು ತರಬೇತಿ ಇಲಾಖೆಯೂ ಮೆಚ್ಚುಗೆಯ ಮಾತುಗಳನ್ನಾಡಿದೆ. ಉದ್ಯೋಗ ಸಿಕ್ಕವರು ಸಂತೋಷ ಪಟ್ಟಿದ್ದಾರೆ. ಮೇಳದಲ್ಲಿ ಪಾಲ್ಗೊಂಡ ಯಾರಿಂದಲೂ ಅಸಮಾಧಾನದ ಮಾತುಗಳು ಕೇಳಿ ಬಂದಿಲ್ಲ. ಒಟ್ಟಿನಲ್ಲಿ ಉದ್ಯೋಗ ಮೇಳದ ಯಶಸ್ಸು ಖುಷಿ ಕೊಟ್ಟಿದೆ ಎಂದರು.



ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಣ ಸಂಸ್ಥೆಗಳಿವೆ, ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಕೇಂದ್ರಗಳು ಬೇಕಾದಷ್ಟಿವೆ. ಪ್ರತೀ ವರ್ಷ 1 ಲಕ್ಷಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗ ಅರಸಿಕೊಂಡು ಬರುತ್ತಾರೆ. ಕೆಲವರು ಉದ್ಯೋಗ ಪಡೆದುಕೊಂಡರೆ ಅನೇಕರು ಉದ್ಯೋಗ ಇಲ್ಲದೆ ಪರಿತಪಿಸುತ್ತಾರೆ. ಅಂತವರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ನಡೆಸಬೇಕೆನ್ನುವ ಅಪೇಕ್ಷೆ ಇತ್ತು. ಈಗ ಅದು ಸಾಕಾರಗೊಂಡಿದೆ ಎಂದರು. ಕಾರ್ಯಕ್ರಮದ ಉದ್ಘಾಟಕ ಡಾ.ಹರೀಶ್ ಹಂದೆ ಹೇಳಿದಂತೆ ಮಂಗಳೂರಿನಲ್ಲಿ ಆವಿಷ್ಕಾರ ಕೇಂದ್ರ ತೆರೆಯಬೇಕು ಎನ್ನುವ ಪ್ರಸ್ತಾಪ ನನಗೆ ಹೊಸ ಪ್ರೇರಣೆ ನೀಡಿದೆ. ಜಿಲ್ಲೆಯ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರತೀವರ್ಷ ಉದ್ಯೋಗ ಮೇಳ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭ ಬೂಡ ಅಧ್ಯಕ್ಷ ಪಿಯೂಸ್ ರೊಡ್ರಿಗಸ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಬೇಬಿ ಕುಂದರ್, ಯೂಸುಫ್ ಕರಂದಾಡಿ ಮತ್ತಿತರರು ಹಾಜರಿದ್ದರು.


