ಬಂಟ್ವಾಳ : ಸಿಡಿಲು, ಮಿಂಚು, ಮಳೆ ಬರಲಿ, ಬಾರದಿರಲಿ ಬಂಟ್ವಾಳ ಪರಿಸರದಲ್ಲಿ ಬೇಕಾಬಿಟ್ಟಿ ವಿದ್ಯುತ್ ಕಡಿತಕ್ಕಂತು ಲೆಕ್ಕವೇ ಇಲ್ಲ. ಇದು ಇಲ್ಲಿನ ಮೆಸ್ಕಾಂ ಇಲಾಖೆಯ ಕಾರ್ಯವೈಖರಿಗೊಂದು ನಿದರ್ಶನ.
ಕಳೆದೊಂದು ವಾರಗಳಿಂದ ಸಂಜೆಯ ಬಳಿಕ ಮಧ್ಯರಾತ್ರಿವರೆಗೂ ಗುಡುಗು, ಮಿಂಚು, ಒಂದಷ್ಟು ಮಳೆ ಸುರಿಯುತ್ತಿದೆ. ಈ ಸಂದರ್ಭದಲ್ಲಿ ಹಠಾತ್ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಹೀಗೆ ಹೋದ ವಿದ್ಯುತ್ ಗುಡುಗು, ಮಿಂಚು, ಮಳೆ ನಿಂತ ಮೇಲೂ ಪತ್ತೆ ಇರುವುದಿಲ್ಲ.
ಆಗ ಮೆಸ್ಕಾಂ ಜೆ.ಇ. ಸಾಹೇಬ್ರಿಗೂ, ಬಿ.ಸಿ ರೋಡಿನ ತಲಪಾಡಿ ವಿದ್ಯುತ್ ಪ್ರಸರಣಾ ಕೇಂದ್ರಕ್ಕೂ ಗ್ರಾಹಕರು ಫೋನಾಯಿಸಿ ಸುಸ್ತಾಗುತ್ತಾರೆ. ಅಪ್ಪಿ ತಪ್ಪಿ ಫೋನೆತ್ತಿದರೆ ಮಾಮೂಲಿ ಡೈಲಾಗ್ ಲೈನ್ ಫಾಲ್ಟ್, ಸಿಡಿಲು ಬಡಿದು ಅಡಚಣೆ ಇನ್ನಿಲ್ಲದ ಸಬೂಬಿನ ಸಿದ್ಧ ಉತ್ತರ ಸಿಗುತ್ತದೆ.
ಅನಧಿಕೃತ ಶೆಡ್ಡಿಂಗ್?
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲವೇ ಇಲ್ಲ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಬಂಟ್ವಾಳ, ಬಿ.ಸಿ ರೋಡ್ ಪರಿಸರದಲ್ಲಿ ಅನಿಯಮಿತ ವಿದ್ಯುತ್ ಕಡಿತ ಬೆಳಗ್ಗಿನಿಂದಲೇ ಶುರುವಾಗುತ್ತದೆ. ಸಂಜೆಯವರೆಗೂ ಎಷ್ಟು ಬಾರಿ ವಿದ್ಯುತ್ ಕಡಿತಗೊಳ್ಳುವುದಕ್ಕಿಂತ ಎಷ್ಟು ಹೊತ್ತು ವಿದ್ಯುತ್ ಉರಿಯುತ್ತದೆ ಎಂಬಲ್ಲಿಗೆ ತಲುಪಿದೆ. ಹಾಗಾಗಿಯೇ ಇಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿಯಲ್ಲಿದೆಯೇ ಎಂಬ ಅನುಮಾನ ವಿದ್ಯುತ್ ಗ್ರಾಹಕರನ್ನು ಕಾಡಿದೆ.
ಇದನ್ನು ನೀವು ಮೆಸ್ಕಾಂಗೆ ಕೇಳಿದರೆ ಆಗ ಮತ್ತೊಂದು ಡೈಲಾಗ್… ದುರಸ್ಥಿಯ ನೆಪ ಇಂತಹ ಸಿದ್ಧ ಉತ್ತದ ಮೂಲಕ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಗ್ರಾಹಕರ ಕಿವಿಗೆ ಹೂ ಇಡಲು ಯತ್ನಿಸುತ್ತಿದೆ ಎಂಬ ಆರೋಪ ವಿದ್ಯುತ್ ಗ್ರಾಹಕರದ್ದು.
ಜನಪ್ರತಿನಿಧಿಗಳು ಮೌನ
ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣಾ ಸಂದರ್ಭದಲ್ಲೂ ಆಗಾಗ ವಿದ್ಯುತ್ ಕೈಕೊಡುತ್ತಾ ಇತ್ತಾದರೂ ಕಳೆದ 3-4 ದಿನಗಳಂತೆ ತಾಸುಗಟ್ಟಲೇ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತವಾಗುತ್ತಿರಲಿಲ್ಲ.
ಆಗ ವಿದ್ಯುತ್ ಕಡಿತವಾದರೆ ಜನಪ್ರತಿನಿಧಿಗಳು ಗರಂ ಆಗುತ್ತಿದ್ದರು. ಈಗ ಚುನಾವಣೆ ಮುಗಿದಿದೆ. ಸದ್ಯಕ್ಕೆ ಯಾವುದೇ ಚುನಾವಣೆ ಕೂಡ ಜನರ ಮುಂದಿಲ್ಲ. ಹಾಗಾಗಿ ಜನಪ್ರತಿನಿಧಿಗಳು ಕೂಡ ಮೌನವಾಗಿದ್ದಾರೆ. ಇತ್ತ ಬಂಟ್ವಾಳ ಮೆಸ್ಕಾಂ ತಾವು ನಡೆದದ್ದೇ ದಾರಿ, ತಾವು ಮಾಡಿದ ಕಾರ್ಯವೇ ಸರಿ ಎಂಬಂತ ವರ್ತನೆ ಗ್ರಾಹಕರ ಆಕ್ರೋಶಕ್ಕೇ ಕಾರಣವಾಗಿದೆ.
ನಿಯತ್ತಾಗಿ ಬಿಲ್ಲು ಪಾವತಿಸಿದರೂ ವಿದ್ಯುತ್ ಇಲ್ಲ. : ವಿದ್ಯುತ್ ದರ ಎಷ್ಟೇರಿಸಿದರೂ ನಿಯತ್ತಾಗಿ ವಿದ್ಯುತ್ ಬಿಲ್ಲು ಪಾವತಿಸುತ್ತಾರೆ. ಮತ್ತೆ ದರ ಏರಿಕೆಗೆ ಮೆಸ್ಕಾಂ ಮುಂದಾಗಿದೆ. ಆದರೆ ದಿನದ 24 ಗಂಟೆಯೂ ದ.ಕ.ಜಿಲ್ಲೆಯ ಜನರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಿರುವ ಉದಾಹರಣೆ ಮಾತ್ರ ಮೆಸ್ಕಾಂನ ಇತಿಹಾಸದಲ್ಲಿಲ್ಲ. ಇದು ಜಿಲ್ಲೆಯ ಜನರ ದೌಭಾಗ್ಯ.!
