ಮೂಡುಬಿದಿರೆ : ಇಲ್ಲಿನ ತೋಡಾರುವಿನಲ್ಲಿ ನಿನ್ನೆ ಬೆಳಗ್ಗೆ ಹಾಕಿದ್ದ ಟಿಪ್ಪು ಜನ್ಮದಿನಾಚರಣೆಯ ಶುಭಾಶಯ ಕೋರಿರುವ ಬ್ಯಾನರ್ ಅನ್ನು ನಿನ್ನೆ ರಾತ್ರಿ 12.30ಯ ಹೊತ್ತಿಗೆ ಸ್ಥಳದಲ್ಲಿದ್ದ ಗಸ್ತಿನ ಪೊಲೀಸರ ಸಮ್ಮುಖದಲ್ಲೇ ದುಷ್ಕರ್ಮಿಗಳು ಬ್ಯಾನರ್ ಹರಿದು ಪರಾರಿಯಾಗಿದ್ದಾರೆ.
ತಕ್ಷಣವೇ ಪೊಲೀಸರು ಠಾಣೆಗೆ ಮಾಹಿತಿ ನೀಡಿದ್ದರಿಂದ ದುಷ್ಕರ್ಮಿಗಳನ್ನು ಮೂಡುಬಿದಿರೆ ಸಮೀಪ ಅಡ್ಡಗಟ್ಟಿ ಬಂಧಿಸಲಾಗಿದೆ. ಬಂಧಿತರು ಮಡಿಕೇರಿ ಮೂಲದವರಾಗಿದ್ದಾರೆ.

ತೋಡಾರಿನ ವಿಷ್ಣುಮೂರ್ತಿ ದೇವಸ್ಥಾನದ ದ್ವಾರ ಬಳಿಯಿರುವ ರಿಕ್ಷಾಪಾರ್ಕ್ನಲ್ಲಿ ಹಾಕಲಾಗಿದ್ದ ಬ್ಯಾನರ್ ಅನ್ನು ತೆಂಕಮಿಜಾರು ಗ್ರಾಮ ಪಂಚಾಯತ್ನಲ್ಲಿ ಅನುಮತಿ ಪಡೆದೇ ಹಾಕಲಾಗಿತ್ತು. ಸೂಕ್ಷ್ಮ ಪ್ರದೇಶವಾಗಿರುವ ತೋಡಾರಿನಲ್ಲಿ ದುಷ್ಕರ್ಮಿಗಳು ಸೌಹಾರ್ಧ ಕದಡುವ ಯತ್ನದಿಂದಲೇ ಈ ಕೃತ್ಯ ಎಸಗಿದ್ದಾರೆಂದು ಸ್ಥಳೀಯರು ದೂರಿದ್ದಾರೆ.
ಇದೀಗ ಬ್ಯಾನರ್ ಅಳವಡಿಸಿರುವ ಟಿಪ್ಪು ಗಯ್ಸ್ ತೋಡಾರು ಇದರ ಪದಾಧಿಕಾರಿಗಳು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಿದ್ದಾರೆ. ಮಡಿಕೇರಿ ಮೂಲದ ಬಂಧಿತರನ್ನು ಮೂಡುಬಿದಿರೆ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.


