ಮೂಡುಬಿದರೆ: ವ್ಯಾವಹಾರಿಕ ಕಾರಣಕ್ಕೆ ಇಬ್ಬರ ನಡುವೆ ಕೊನ್ನೆಪದವು ಎಂಬಲ್ಲಿ ಶನಿವಾರ ಬಿಸಿ ಮಾತುಕತೆ ಘರ್ಷಣೆಗೆ ಕಾರಣವಾಗಿದ್ದು ಇಬ್ಬರ ಕಡೆಯಿಂದಲೂ ಪರಸ್ಪರ ಹಲ್ಲೆ ಮತ್ತು ಜೀವಬೆದರಿಕೆಯ ಪ್ರಕರಣ ನಡೆದಿರುವುದಾಗಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಇರುವೈಲು ಪರಿಸರದಲ್ಲಿ ಇತ್ತೀಚಿಗೆ ಮೀನು ವ್ಯಾಪಾರ ಆರಂಭಿಸಿರುವ ಸುನೀಲ್, ಇರುವೈಲಿನಲ್ಲಿ ಮೀನು ವ್ಯಾಪಾರ ಮಾಡದಂತೆ ಬೆದರಿಕೆಯೊಡ್ಡಿದ್ದು ತಆತನ ಕಡೆಯವರಾದ ಪ್ರಜ್ವಲ್ ಮತ್ತು ಯಶೋಧರ್ ಜತೆಗೆ ಒಮ್ನಿಯಲ್ಲಿ ತನ್ನ ಬೈಕಿಗೆ ಅಡ್ಡ ಬಂದು ಬೆದರಿಕೆಯೊಡ್ಡಿದ್ದ. ಸುನೀಲ್ ತಲವಾರು ಬೀಸಿದ್ದು ಜತೆಗಿದ್ದವರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಗಂಟಾಲ್ಕಟ್ಟೆಯ ಮೀನು ವ್ಯಾಪಾರಿ ದಾವೂದ್ ಹಕೀಂ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದಾವೂದ್ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೇ ವೇಳೆ ಯಶೋಧರ್ ನಲಿಕೆ ಅವರೂ ಮೂಡುಬಿದರೆ ಠಾಣೆಗೆ ದೂರು ನೀಡಿದ್ದು ಒಮ್ನಿಯಲ್ಲಿ ಹೋಗುತ್ತಿದ್ದ ತಮಗೆ ದಾವೂದ್ ಮತ್ತು ಇನ್ನೊಬ್ಬರು ಬೈಕ್ ಅಡ್ಡವಿಟ್ಟು ತನಗೆ (ಯಶೋಧರ್ಗೆ) ಜಾತಿ ನಿಂದನೆ ಮಾಡಿ ಇಬ್ಬರ ಮೇಲೂ ಹಲ್ಲೆ, ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಯಶೋಧರ್ ಮತ್ತು ಸುನೀಲ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಡುಬಿದರೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
