ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಸಮೀಪದ ಅಣ್ಣಳಿಕೆ ತಿರುವು ರಸ್ತೆಯಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಕೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಸ್ಥಳೀಯರು ಈಚೆಗೆ ನಡೆಸಿದ ದಿಢೀರ್ ಪ್ರತಿಭಟನೆ ಪರಿಣಾಮ ಇಲ್ಲಿನ ತಿರುವು ರಸ್ತೆ ವಿಸ್ತರಣೆಗೊಳಿಸಲಾಗಿದೆ.

ಮಂಗಳೂರು-ಸೊಲ್ಲಾಪುರ ನಡುವೆ ಎಚ್ಪಿಸಿಎಲ್ ಗ್ಯಾಸ್ ಪೈಪ್ಲೈನ್ ಅಳವಡಿಸುವ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಇಲ್ಲಿನ ಸೋರ್ಣಾಡು-ಅಣ್ಣಳಿಕೆ ರಸ್ತೆ ನಡುವೆ ಖಾಸಗಿ ಜಮೀನು ಸಹಿತ ರಸ್ತೆಯುದ್ದಕ್ಕೂ ಅಕ್ರಮವಾಗಿ ಪ್ರವೇಶಿಸಿ ಜೆಸಿಬಿ ಮತ್ತು ಹಿಟಾಚಿ ಮೂಲಕ ರಸ್ತೆ ಅಗೆಯಲಾಗುತ್ತಿದೆ ಎಂದು ಆರೋಪಿಸಿ ಈಚೆಗೆ ದಿಢೀರ್ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ವಸಂತ ಕುಮಾರ್ ಮತ್ತಿತರರು ಧಾವಿಸಿ ಬಂದು ಸ್ಥಳೀಯಾಡಳಿತ ಮತ್ತು ಸರ್ಕಾರ ನೀಡಿರುವ ನಿರ್ದಿಷ್ಟ ಪರವಾನಿಗೆ ಮತ್ತು ನಿರಾಕ್ಷೇಪಣಾ ಪತ್ರ ನೀಡದೆ ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದ್ದರು.
ಇದೇ ವೇಳೆ ಲೋಕೋಪಯೋಗಿ ಇಲಾಖೆಗೆ ಗುತ್ತಿಗೆ ಸಂಸ್ಥೆಯು ರೂ 6ಲಕ್ಷ ಮೊತ್ತ ಮುಂಗಡ ಪಾವತಿಸಿರುವ ಬಗ್ಗೆ ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ ಭಟ್ ಸಹಿತ ಎಚ್ಪಿಸಿಎಲ್ ಮತ್ತು ಗುತ್ತಿಗೆ ಸಂಸ್ಥೆ ಎಂಜಿನಿಯರ್ ಮತ್ತಿತರ ಅಧಿಕಾರಿಗಳು ಧಾವಿಸಿ ಬಂದು ಪ್ರತಿಭಟನಾಕಾರರಿಗೆ ವಿವರಿಸಿದ್ದರು. ಮಾತ್ರವಲ್ಲದೆ ಪ್ರತೀ ವರ್ಷ ಹಲವಾರು ವಾಹನಗಳು ಇಲ್ಲಿನ ಅಣ್ಣಳಿಕೆ ತಿರುವು ರಸ್ತೆಯಲ್ಲಿ ಉರುಳಿ ಚರಂಡಿಗೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರ ಆಗ್ರಹದಂತೆ ಈ ರಸ್ತೆ ವಿಸ್ತರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿತ್ತು.
ಇದೀಗ ಕಳೆದ ಎರಡು ದಿನಗಳಿಂದ ಇಲ್ಲಿನ ತೀರಾ ಕಿರಿದಾಗಿದ್ದ ತಿರುವು ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಸಂತಸಕ್ಕೆ ಕಾರಣವಾಗಿದೆ.
