ಮಂಗಳೂರು: ಮಂಗಳೂರಿನ ಸಬ್ ಜೈಲಿನಲ್ಲಿ ವಿಚರಣಾಧೀನ ಖೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಇಬ್ಬರ ಕೊಲೆ ನಡೆದು 12 ಮಂದಿಗೆ ಗಂಭೀರ ಹಲ್ಲೆ ನಡೆದಿದೆ. ಮೂಲ್ಕಿಯ ಸುಖಾನಂದ ಶೆಟ್ಟಿ ಹತ್ಯಾ ಆರೋಪಿ, ಅಲ್ಲದೆ ಹಲವು ಪ್ರಕರಣಗಳ ಆರೋಪಿಯಾಗಿರುವ ಕುಖ್ಯಾತ ಕ್ರಿಮಿನಲ್ ಮಾಡೂರು ಇಸುಬ್ ಯಾನೆ ಮಾಡೂರು ಯೂಸಫ್ ಹಾಗೂ ಹಲವು ಪ್ರಕರಣಗಳ ಆರೋಪಿಯಾಗಿದ್ದು, ಅದರಲ್ಲಿ ಹಲವು ಪ್ರಕರಣಗಳಲ್ಲಿ ಖುಲಾಸೆಗೊಂಡು ಇನ್ನೇನು ಜೈಲಿನಿಂದ ಹೊರಬರಬೇಕಾಗಿದ್ದ ಗಣೇಶ್ ಶೆಟ್ಟಿ ಕೊಲೆಗೀಡಾದ ದುರ್ದೈವಿಗಳು.
ಮಂಗಳೂರಿನ ಹಳೆ ಜೈಲಿನಿಂದ ಹೊಸ ಜೈಲಿಗೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಮಾಡೂರು ಇಸುಬುವಿಗೆ ಮತ್ತೊಬ್ಬ ಖೈದಿಯಾಗಿರುವ ಆಕಾಶಭವನ ಶರಣ್ ಜೊತೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಇಂದು ಮುಂಜಾನೆ ಆ ಗಲಾಟೆ ತಾರಕಕ್ಕೇರಿ, ಇತ್ತಂಡಗಳ ಮಧ್ಯೆ ಮಾರಾಮಾರಿ ನಡೆದ ಪರಿಣಾಮ ಇಸುಬು ಹಾಗೂ ಗಣೇಶ್ ಶೆಟ್ಟಿ ಗಂಭೀರ ಗಾಯಗೊಂಡಿದ್ದಾರೆ. ಗಲಾಟೆಯಲ್ಲಿ ಇತರ ಖೈದಿಗಳ ಸಹಿತ ಹಲವು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಇಸುಬು ಹಾಗೂ ಗಣೇಶನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ ದಾರಿ ಮಧ್ಯೆ ಅಸುನೀಗಿದ್ದಾರೆ.

11

jail_021115-1ಇಸುಬು ದಾವೂದ್ ಇಬ್ರಾಹಿಂ ಬಂಟ:

ಮಾಡೂರು ಇಸುಬು ದಾವೂದು ಇಬ್ರಾಹಿಂ ಹಾಗೂ ಛೋಟಾ ಶಕೀಲ್‍ನ ಬಂಟನಾಗಿದ್ದು, 2010ರಲ್ಲಿ ಇಂಟರ್‍ಪೋಲ್ ನೆರವಿನಿಂದ ರಿಯಾದ್‍ನಲ್ಲಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಈತನ ವಿಚಾರಣೆಗೆಂದು ಈತನನ್ನು ಮಂಗಳೂರಿನ ಸಬ್‍ಜೈಲಿನಲ್ಲಿ ಇರಿಸಲಾಗಿತ್ತು. ಬಂಧಿತನಾಗಿ ಜೈಲ್‍ನಲ್ಲಿದ್ದ ಆಕಾಶಭವನ ಶರಣ್ ಎಂಬಾತ ಭೂಗತ ಪಾತಕಿ ವಿಕ್ಕಿಶೆಟ್ಟಿ ಸಹಚರನಾಗಿದ್ದು, ಇತ್ತಂಡಗಳ ಮಧ್ಯೆ ಹಲವು ದಿನಗಳಿಂದ ಗ್ಯಾಂಗ್‍ವಾರ್ ನಡೆಯುತ್ತಲೇ ಇತ್ತು. ಅಲ್ಲದೆ ಈ ಹಿಂದೆಯೂ ಗಲಾಟೆ ನಡೆದು ಪೊಲೀಸ್ ಅಧಿಕಾರಿಗಳು ಸಹಿತ ಹಲವು ಮಂದಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಇತ್ತಂಡಗಳ ಮಧ್ಯೆ ಆಗಾಗ ಮಾರಾಮರಿ ನಡೆಯುತ್ತಿದ್ದರೂ, ತಂಡಗಳನ್ನು ಪರಸ್ಪರ ಬೇರೆ ಬೇರೆ ಸ್ಥಳದಲ್ಲಿ ಇರಿಸದ ಜೈಲ್ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಮಾಡೂರಿ ಇಸುಬು ಮೂಲ್ಕಿ ಸುಖಾನಂದ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾಗಿದ್ದ. ಈತನ ಮೇಲೆ ಬಿಜೆಪಿ ನಾಯಕರಿಗೆ ಕೊಲೆ ಬೆದರಿಕೆ, ಕೊಲೆ, ಕೊಲೆಯತ್ನ, ಹಫ್ತಾ ವಸೂಲಿ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿತ್ತು. ಆದರೆ ಗಣೇಶ್ ಶೆಟ್ಟಿ ಎಂಬಾತನ ಮೇಲೂ ಹಲವು ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದ ಎನ್ನಲಾಗಿದೆ. ಇನ್ನೊಂದು ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಮುಂದಿನ ತಿಂಗಳಲ್ಲಿ ಆತ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇತ್ತು ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈತ ಗಲಾಟೆಯನ್ನು ಬಿಡಿಸಲು ಹೋದಾಗ ಈತನ ಮೇಲೆ ಗಂಭೀರ ಹಲ್ಲೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಇತರ ಖೈದಿಗಳಾದ ಪ್ರದೀಪ್ ವಾಮಂಜೂರು, ಉಮೇಶ್ ಕುಂಬಾರ್, ಯುವರಾಜ್ ಸೂರಿಂಜೆ, ಶೋಭರಾಜ್, ನಿತೇಶ್, ಇಕ್ಬಾಲ್ ಹಾಗೂ ಆಸೀಫ್ ಸಹಿತ ಒಟ್ಟು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

 

By suddi9

Leave a Reply

Your email address will not be published. Required fields are marked *