ಬಂಟ್ವಾಳ: ನವರಾತ್ರಿಯ ಪ್ರಯುಕ್ತ ನಗರ ವ್ಯಾಪ್ತಿಯಲ್ಲಿ ಕಸವಿಲೇವಾರಿ ಹಾಗೂ ಶುಚಿತ್ವ ಮಾಡದಿರುವ ಮತ್ತು ಮುಖ್ಯಮಂತ್ರಿಗಳ ವಿಶೇಷ 5 ಕೋಟಿ ಅನುದಾನದಲ್ಲಿ ಬಿಜೆಪಿ ಸದಸ್ಯರ ವಾರ್ಡ್ಗೆ ಅನುದಾನವನ್ನು ಮೀಸಲಿಡದೆ ಕಡೆಗಣಿಸಿರುವ ಆಡಳಿತ ಪಕ್ಷದ ತಾರತಮ್ಯ ನೀತಿಯನ್ನು ವಿರೋಧಿಸಿ ಬಿಜೆಪಿಯ ಹಿರಿಯ ಸದಸ್ಯ ಗೋವಿಂದ ಪ್ರಭು ಅವರು ಏಕಾಂಗಿಯಾಗಿ ಸದನದ ಬಾವಿಗಿಳಿದು ಪ್ರತಿಭಟಿಸಿದ ವಿದ್ಯಮಾನ ಬುಧವಾರ ನಡೆದ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ನಡೆಯಿತು.

9

3

4

5

6

7

8
ಸಭೆ ಆರಂಭವಾಗುತ್ತಿದ್ದಂತೆಯೇ ಸದಸ್ಯ ಗೋವಿಂದ ಪ್ರಭು ಅವರು, ನವರಾತ್ರಿಯ ಸಮಯದಲ್ಲಿ ಬಂಟ್ವಾಳ ನಗರದಲ್ಲಿ ಸಮರ್ಪಕವಾಗಿ ಕಸವಿಲೇವಾರಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನವರಾತ್ರಿಯ ಆರಂಭಕ್ಕೆ ಮುನ್ನವೇ ಈ ಬಗ್ಗೆ ಮುಖ್ಯಾಧಿಕಾರಿಯವರ ಗಮನಕ್ಕೆ ತಂದರೂ ಓರ್ವ ಸದಸ್ಯನ ಮನವಿಗೂ ಸ್ಪಂದಿಸದಿರುಲು ಕಾರಣವೇನು ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರಲ್ಲದೆ, ಈ ಕ್ರಮದಿಂದ ಜನಪ್ರತಿನಿಧಿಯಾಗಿ ಸಾರ್ವಜನಿಕರಿಂದ ಅವಮಾನಕ್ಕೊಳಗಾಗುವಂತಾಗಿದೆ.

ತನ್ನ ಸುದೀರ್ಘ ಅವಧಿಯ ಸದಸ್ಯತ್ವದ ಸಮಯದಲ್ಲಿ ಇಂತಹಾ ಅವಮಾನ ಆಗಿಲ್ಲ ಇದು ದುರುದ್ದೇಶ ಪೂರ್ವಕವಾಗಿಯೇ ಮಾಡಲಾಗಿದೆ ಎಂದು ಅಸಾಮಾಧನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರ ಅಸಮರ್ಪಕ ಉತ್ತರದಿಂದ ಮತ್ತಷ್ಟು ಆಕ್ರೋಶಭರಿತರಾದ ಗೋವಿಂದ ಪ್ರಭು ಅವರು, ತನ್ನ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವಂತೆ ಪಟ್ಟು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಈ ಹಂತದಲ್ಲಿ ಸದಸ್ಯರುಗಳಾದ ವಾಸು ಪೂಜಾರಿ, ಸದಾಶಿವ ಬಂಗೇರ, ಪ್ರವೀಣ್, ಮಹಮ್ಮದ್ ನಂದರಬೆಟ್ಟು, ಉಪಾಧ್ಯಕ್ಷೆ ಯಾಸ್ಮೀನ್, ಇಕ್ಬಾಲ್, ದೇವದಾಸ ಶೆಟ್ಟಿ ಭಾಸ್ಕರ್ ಟೈಲರ್ ಗೋವಿಂದ ಪ್ರಭು ಅವರನ್ನು ಮನವೊಲಿಸಿ ತಮ್ಮ ಆಸನಕ್ಕೆ ಕರೆತರುವಲ್ಲಿ ಯಶಸ್ವಿಯಾದರಲ್ಲದೆ ಮುಂದಿನ ಎರಡು ದಿನಗಳಲ್ಲಿ ಇವರ ಬೇಡಿಕೆಗೆ ಪರಿಹಾರ ಒದಗಿಸುವಂತೆ ಮುಖ್ಯಾಧಿಕಾರಿಯವರಲ್ಲಿ ಸೂಚಿಸಿದರು.
ಇದೇ ವೇಳೆ ಕಂಚಿನಡ್ಕ ಪದವು ತ್ಯಾಜ್ಯಸಂಸ್ಕರಣಾ ಘಟಕದ ಮುಂದುವರಿದ ಕಾಮಗಾರಿಗೆ ಜಿಲ್ಲಾಧಿಕಾರಿಯವರು ಅನುಮೋದನೆ ನೀಡಿ ಆರು ತಿಂಗಳಾದರೂ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿರುವ ಬಗ್ಗೆಯೂ ಸದಸ್ಯರು ಅಸಾಮಾಧಾನವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಈ ವಿಚಾರದಲ್ಲಿ ಸಣ್ಣಮಟ್ಟಿನ ತಾಂತ್ರಿಕ ಸಮಸ್ಯೆ ಇದೆ ಎಂದಾಗ ಸದಸ್ಯರು ಒಪ್ಪಿಕೊಳ್ಳಲಿಲ್ಲ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದ್ದು  ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಸೂಚಿಸಿದರು.
2015-16 ನೇ ಸಾಲಿಗೆ 14 ನೇ ಹಣಕಾಸು ಆಯೋಗದಿಂದ ಮಂಜೂರಾದ 124 ಲಕ್ಷ ರೂ. ಅನುದಾನಕ್ಕೆ ಕ್ರಿಯಾಯೋಜನೆ ನಡೆಸಲು ಸಭೆ ನಿರ್ಧರಿಸಿತು. ಸದ್ರಿ ಅನುದಾನದಲ್ಲಿ ಮೂಲಭೂತ ಅಗತ್ಯಗಳಿಗೆ ಮೀಸಲಿಟ್ಟು ಉಳಿದೆ ಅನುದಾನದಲ್ಲಿ ಪ್ರತೀ ಸದಸ್ಯರ ವಾರ್ಡ್ನ ಅಭಿವೃದ್ದಿ ಕಾರ್ಯಗಳಿಗೆ 3.30 ಲಕ್ಷ ರೂ ಹಂಚಿಕೆ ಮಾಡಲು ತೀರ್ಮಾನಿಸಲಾಯಿತು.
ನೀರಿನ ಶುಲ್ಕ ವಸೂಲಾತಿಯಲ್ಲಿ ನಿರೀಕ್ಷಿತ ಆದಾಯ ಕುಂಠಿತವಾಗಿದ್ದು ಈ ಬಗ್ಗೆ ನೀರಿನ ಶುಲ್ಕ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ದೇವದಾಸ ಶೆಟ್ಟಿ ಆಗ್ರಹಿಸಿದರೆ ಅಕ್ರಮ ನಳ್ಳಿ ಸಂಪರ್ಕದ ವಿರುದ್ದ ಕ್ರಮಕೈಗೊಳ್ಳಬೇಕು ಇಲ್ಲವೇ ಅಕ್ರಮಗೊಳಿಸುವ ಮೂಲಕ ಆದಾಯ ಹೆಚ್ಚಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸದಸ್ಯ ಸದಾಶಿವ ಬಂಗೇರ ಒತ್ತಾಯಿಸಿದರು.
ಎತ್ತಿನ ಹೊಳೆ ಯೋಜನೆ ವಿರುದ್ದ ಈಗಾಗಲೇ ಪುರಸಭೆ ಕೈಘೊಂಡಿರುವ ಸರ್ವಾನುಮತದ ನಿರ್ಣಯವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಬೇಕೆಂದು ಸದಸ್ಯ ದೇವದಾಸ ಶೆಟ್ಟಿ ಸಭೆಯ ಗಮನಸೆಳೆದರು. ಈ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿಯವರು ಪ್ರತಿಕ್ರಿಯಿಸಿದರು.
ನಿರ್ಮಲ ಬಂಟ್ವಾಳ ಯೋಜನೆಯಲ್ಲಿ ಪುರಸಭೆ ಖರೀದಿಸಿದ್ದ ಕಟ್ಟಿಂಗ್ ಮಿಷಿನ್ ಹಾಗೂ ಇನ್ನಿತರ ಸಲಕರಣೆಗಳು ನಾಪತ್ತೆಯಾಗಿದ್ದು ಈ ಬಗ್ಗೆ ವಿವರ ನೀಡಬೇಕೆಂದು ಸದಸ್ಯ ದೇವದಾಸ ಶೆಟ್ಟಿ ಆಗ್ರಹಿಸಿದಾಗ  ಉತ್ತರಿಸಿದ ಆರೋಗ್ಯಾಧಿಕಾರಿ ರತ್ನಪ್ರಸಾದ್ ರವರು, ಕೆಲ ತಿಂಗಳ ಹಿಂದೆಯೇ ಅದನ್ನು ತ್ಯಾಜ್ಯವಿಲೇವಾರಿಯ ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದ್ದು, ಕೌನ್ಸಿಲ್ ನಿರ್ಣಯಿಸಿದರೆ ಅದನ್ನು ಪುರಸಭೆಗೆ ವಾಪಾಸು ಪಡೆಯಲಾಗುವುದು ಎಂದರು. ಈ ವೇಳೆ ಸದಸ್ಯರು ಎಲ್ಲಾ ಸೊತ್ತುಗಳ ಸಧ್ವಿನಿಯೋಗವಾಗಬೇಕೆಂದು ಸಲಹೆ ನೀಡುವುದರೊಂದಿಗೆ ಆ ಚರ್ಚೆಗೆ ತೆರಬಿತ್ತು

By suddi9

Leave a Reply

Your email address will not be published. Required fields are marked *