- ಬಂಟ್ವಾಳ: ತಾಲೂಕಿನ ಸೊರ್ನಾಡು-ಅಣ್ಣಳಿಕೆ ನಡುವೆ ಜಿಲ್ಲಾ ಮುಖ್ಯರಸ್ತೆಯಲ್ಲಿ ಗ್ಯಾಸ್ ಸಾಗಾಟಕ್ಕಾಗಿ ಪೈಪ್ ಅಳವಡಿಸಲು ಗುತ್ತಿಗೆದಾರ ಸಂಸ್ಥೆ ರಸ್ತೆ ಅಗೆತಕ್ಕೆ ನಡೆಸಿದ ಸಿದ್ಧತೆಗೆ ಗ್ರಾಮಸ್ಥರು ತಡೆಯೊಡ್ಡಿ ದಿಗ್ಬಂಧನ ಹೇರಿದ ಘಟನೆ ಸೋಮವಾರ ನಡೆದಿದೆ.
ಎಚ್ಪಿಸಿಎಲ್ ಸಂಸ್ಥೆಗಾಗಿ ಮಂಗಳೂರಿನಿಂದ ಸೊಲ್ಲಾಪುರಕ್ಕೆ ಗ್ಯಾಸ್ ಸಾಗಿಸಲು ಎಎಸ್ ಪೈಪ್ಲೈನ್ ಸಂಸ್ಥೆ ಗುತ್ತಿಗೆವಹಿಸಿದ್ದು ಈಗಾಗಲೇ ಸಾಗಾಟದ ದಾರಿಯಲ್ಲಿ ಎಲ್ಲೆಡೆ ಹೊಂಡ ತೋಡಿ ಬೃಹತ್ ಗಾತ್ರದ ಪೈಪ್ಗಳನ್ನು ಅಳವಡಿಸುತ್ತಿದ್ದಾರೆ. 



- ಬಂಟ್ವಾಳ – ಮೂಡಬಿದ್ರೆ ರಸ್ತೆಯ ಅಣ್ಣಳಿಕೆ ಬಳಿ ರಸ್ತೆಯ ಇಕ್ಕೆಲಗಳಲ್ಲಿ ಅಗೆದಿದ್ದು ಪೈಪ್ ಅಳವಡಿಕೆಯಾಗಿತ್ತು. ಇಲ್ಲಿ ಖಾಸಗಿ ಜಮೀನಿನಲ್ಲಿ ಪರ್ಯಾಯ ರಸ್ತೆ ನಿರ್ಮಿಸಿ ಮುಖ್ಯರಸ್ತೆಯನ್ನು ಅಗೆದು ಪೈಪ್ ಅಳವಡಿಸಲು ರವಿವಾರ ಸಿದ್ಧತೆ ನಡೆದಿತ್ತು. ಈ ವಿಚಾರ ಸ್ಥಳೀಯ ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ಅವರ ಗಮನಕ್ಕೆ ಬಂದು ರಾತ್ರಿ ವಿಚಾರಿಸಿದಾಗ ಸಂಸ್ಥೆ ರಸ್ತೆಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯಿಂದಾಗಲೀ, ಸ್ಥಳೀಯ ಗ್ರಾಮ ಪಂಚಾಯತ್ನಿಂದಾಗಲೀ ಪರವಾನಿಗೆ ಪಡೆದಿರಲಿಲ್ಲ. ಮಾತ್ರವಲ್ಲ ಯಾವುದೇ ಮನವಿ ಕೂಡ ನೀಡಿರಲಿಲ್ಲ. ಈ ಬಗ್ಗೆ ಲೋಕೋಪಯೋಗಿ ಇಂಜಿನಿಯರ್ ಉಮೇಶ್ ಭಟ್ ಅವರನ್ನು ಸಂಪರ್ಕಿಸಿದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ವಿಷಯ ತಿಳಿದ ನೂರಾರು ಗ್ರಾಮಸ್ಥರು ವಸಂತ ಕುಮಾರ್ ಅವರ ನೇತೃತ್ವದಲ್ಲಿ ರಸ್ತೆ ಅಗೆಯದಂತೆ ದಿಗ್ಬಂಧನ ಹೇರಿ ತಡೆಯೊಡ್ಡಿದರು.
ಎಚ್ಪಿಸಿಎಲ್ ಸಂಸ್ಥೆಯ ಅಕಾರಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ ಪಂಚಾಯತ್ ಹಾಗೂ ಲೋಕೋಪಯೋಗಿಯಿಂದ ಅನುಮತಿ ಪಡೆದುಕೊಂಡಿರುತ್ತೇವೆ ಎಂದು ಉತ್ತರಿಸಿದ್ದಾರೆ. ಆದರೆ ದಾಖಲೆಗಳನ್ನು ತೋರಿಸುವಂತೆ ಕೇಳಿಕೊಂಡಾಗ ಅಸಮರ್ಪಕ ಉತ್ತರ ನೀಡಿದ್ದಾರೆ. ಇದು ಗ್ರಾಮಸ್ಥರ ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು ದಾಖಲೆಗಳನ್ನು ನೀಡದೆ ಯಾವುದೇ ಕಾರಣಕ್ಕೂ ಕಾಮಗಾರಿ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಅಲ್ಲದೆ ಪೈಪ್ಲೈನ್ ಹಾದುಹೋಗುವ ಜಮೀನಿನ ಮಾಲಕರಿಗೆ ನ್ಯಾಯೋಚಿತ ಪರಿಹಾರವನ್ನು ನೀಡಿಲ್ಲ ಎಂಬ ಆರೋಪ ಸಂತ್ರಸ್ಥ ಜಮೀನು ಮಾಲಕರಿಂದ ಕೇಳಿಬಂದಿದ್ದು ಸಂಸ್ಥೆಯ ಅಕಾರಿಗಳು ಇದನ್ನು ನಿರಾಕರಿಸಿದ್ದಾರೆ. ಬಂಟ್ವಾಳ ಲೋಕೋಪಯೋಗಿ ಇಲಾಖೆ ಇಂಜಿನಿಯರ್, ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಭಿಯಂತರರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.
ಎಚ್ಪಿಸಿಎಲ್ ಸಂಸ್ಥೆಯ ಅಕಾರಿಗಳು ಸ್ಥಳಕ್ಕಾಗಮಿಸಿ ತಾವು ಈಗಾಗಲೇ ಇಲಾಖೆಯ ಮಂಗಳೂರು ಕಛೇರಿಯಲ್ಲಿ 6 ಲಕ್ಷ ರೂ. ಠೇವಣಿ ಪಾವತಿಸಿದ್ದು ಅಗೆದ ರಸ್ತೆಗೆ ಮರುಡಾಮರೀಕರಣ ನಡೆಸುವ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ದಿಗ್ಬಂಧನ ಹಿಂತೆಗೆದುಕೊಂಡಿದ್ದರು. ಈ ಭಾಗದಲ್ಲಿ ರಸ್ತೆ ಕಿರಿದಾಗಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಇದೀಗ ಅದೇ ಜಾಗದಲ್ಲಿ ಪೈಪ್ಲೈನ್ಗೆ ಅಗೆತಕ್ಕೆ ಸಿದ್ಧತೆ ನಡೆಸಿದ್ದು ಈ ರಸ್ತೆಯ ಅಗಲೀಕರಣ ನಡೆಸಬೇಕೆಂದು ಅಕಾರಿಗಳನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮುಖ್ಯರಸ್ತೆಗಳಲ್ಲದೆ ಜಿಲ್ಲೆಯ ಹಲವು ಗ್ರಾಮೀಣ ರಸ್ತೆಗಳಲ್ಲಿ ವಿವಿಧ ಕಾರಣಗಳಿಗಾಗಿ ಪೈಪ್ ಅಳವಡಿಸಲು ರಸ್ತೆ ಅಗೆತ ನಡೆಸಿ ಬಳಿಕ ಕೇವಲ ಮಣ್ಣುಮುಚ್ಚಿ ಡಾಮರೀಕರಣ ನಡೆಸದಿರುವ ಬಗ್ಗೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.
ಚಿತ್ರ: ಕಿಶೋರ್ ಪೆರಾಜೆ.
