ಮಂಗಳೂರು: ಅತ್ತ ಛೋಟಾ ರಾಜನ್ ಅರೆಸ್ಟ್ ಆಗಿದ್ದರೆ ಇತ್ತ ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳು ಅರೆಸ್ಟ್ ಆಗಿದ್ದು ಚೋಟಾ ರಾಜನ್ ಅಲ್ಲ ಸೈನೈಡ್ ಮೋಹನ್ ಎಂದು ವರದಿ ಪ್ರಕಟಿಸಿದವು. ಸೀರಿಯಲ್ ಕಿಲ್ಲರ್ ಎಂದೇ ಕುಖ್ಯತನಾದ ಸೈನೈಡ್ ಮೋಹನ ಈಗಗಲೇ ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದು, ಗಲ್ಲು ಶಿಕ್ಷೆಗೆ ಒಳಗಾಗಿದ್ದಾನೆ.
ಬಂಟ್ವಾಳ ತಾಲ್ಲೂಕಿನ ಬರಿಮಾರು ಗ್ರಾಮದ ಅನಿತಾ (22) ಹಾಗೂ ವಾಮದ ಪದವು ಗ್ರಾಮದ ಕೋಡಂಬೆಟ್ಟುವಿನ ಲೀಲಾ (32) ಹಾಗೂ ಸುಳ್ಯ ತಾಲ್ಲೂಕಿನ ಪೆರ್ವಾಜೆ ಗ್ರಾಮದ ಸುನಂದಾ (28) ಕೊಲೆ ಪ್ರಕರಣಗಳಲ್ಲಿ ಬಂಟ್ವಾಳ ತಾಲ್ಲೂಕಿನ ಕನ್ಯಾನದ ಶಿಕ್ಷಕ ಮೋಹನ ಕುಮಾರ್‍ಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ನೀಡಲಾಗಿದೆ. ಆತನ ವಿರುದ್ಧ ದಾಖಲಾದ 17 ಪ್ರಕರಣಗಳು ವಿಚಾರಣೆಯ ಹಂತದಲ್ಲಿದೆ.

ಮೋಹನ ಸರ್ಕಾರಿ ನೌಕರಿಯಲ್ಲಿದ್ದೇನೆ ಎಂದು ಹೇಳಿಕೊಂಡು, ಸುಳ್ಳು ಹೆಸರಿನಲ್ಲಿ ಪರಿಚಯಿಸಿಕೊಂಡು ಬಡ ಕುಟುಂಬದ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಅವರನ್ನು ಮದುವೆಯಾಗುವುದಾಗಿ ನಂಬಿಸಿ ದೂರದ ಊರಿಗೆ ಕರೆದೊಯ್ದು ಅಲ್ಲಿನ ವಸತಿಗೃಹಗಳಲ್ಲಿ ಅವರ ಜತೆ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಬಳಿಕ ಗರ್ಭಧಾರಣೆಯನ್ನು ತಡೆಯುವ ಔಷಧಿ ಎಂದು ಸೈನೈಡ್ ನೀಡಿ ಕೊಲೆ ಮಾಡುತ್ತಿದ್ದ.
ಎಲ್ಲಾ ಪ್ರಕರಣಗಳಲ್ಲೂ ಮಹಿಳೆಗೆ ಸೈನೈಡ್ ತಿನ್ನಿಸಲು ಬಳಸುತ್ತಿದ್ದುದು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳನ್ನೇ. ಬಸ್ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆ ಸೈನೈಡ್ ಸೇವಿಸಿ ಮೃತಪಟ್ಟಿದ್ದು ಖಚಿತಪಟ್ಟ ಬಳಿಕ ವಸತಿಗೃಹಕ್ಕೆ ತೆರಳಿ ಆ ಮಹಿಳೆಯ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ. ಶಿಕ್ಷೆಯಾದ ಮೂರು ಪ್ರಕರಣಗಳಲ್ಲೂ ಮೋಹನ ಅತ್ಯಾಚಾರ ಮತ್ತು ಕೊಲೆ ನಡೆಸಿರುವುದು ಸಾಂದರ್ಭಿಕ ಸಾಕ್ಷ್ಯಗಳಿಂದ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ನ್ಯಾಧೀಶರು ಗಲ್ಲು ಶಿಕ್ಷೆ ಪ್ರಕಟಿಸಿದ್ದರು.
ಆದರೆ ಕೆಲವೊಂದು ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳು ಅರೆಸ್ಟ್ ಆಗಿದ್ದು ಛೋಟಾ ರಾಜನ್ ಅಲ್ಲ, ಸೈನೈಡ್ ಮೋಹನ ಎಂದು ಸುಳ್ಳು ವರದಿ ಪ್ರಕಟಿಸಿ ಅಜ್ಞಾನ ಪ್ರಕಟಿಸಿದ್ದವು.
