ಉಳ್ಳಾಲ: ರೌಡಿಗಳ ಮಧ್ಯೆ ಮೆಹಂದಿ ಮನೆಯಲ್ಲಿ ನಡೆದ ಗಲಾಟೆ ಓರ್ವನ ಕೊಲೆ ಮೂಲಕ ಪರ್ಯಾವಸನಗೊಂಡಿರುವ ಘಟನೆ ತೊಕ್ಕೊಟ್ಟು ವಿನಮ್ರಾ ಬಾರಿನ ಎದುರುಗಡೆ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.


ಬೋಳಾರ ನಿವಾಸಿ ವಿಕ್ರಂ.ಆರ್ ಯಾನೆ ಬೋಳಾರ ವಿಕ್ಕಿ (28) ಹತ್ಯೆಯಾದಾತ. ಈತನ ಎದುರುಬಣದ ರೌಡಿ ಸೈಕೋ ವಿಕ್ಕಿ ತಂಡ ಹತ್ಯೆ ನಡೆಸಿದೆ ಎನ್ನಲಾಗಿದೆ. ಕುಂಪಲ ಮೂರುಕಟ್ಟದಲ್ಲಿ ತಮ್ಮ ಸ್ನೇಹಿತ ರೋಹಿತ್ ಎಂಬಾತನ ಮೆಹಂದಿ ಕಾರ್ಯಕ್ರಮದಲ್ಲಿ ಎರಡು ರೌಡಿಗಳ ತಂಡ ಭಾಗವಹಿಸಿತ್ತು. ಅಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯೊಂದು ನಡೆದಿತ್ತು. ಆ ಬಳಿಕ ಸೈಕೋ ವಿಕ್ಕಿ ಇತರ ಮೂವರ ಜತೆಗೆ ಸೇರಿಕೊಂಡು ಬೋಳಾರ ವಿಕ್ಕಿಯನ್ನು ಅಟ್ಟಾಡಿಸಲು ಆರಂಭಿಸಿದ್ದರು. ಸೈಕೋ ವಿಕ್ಕಿ ತಂಡ ಸ್ಕಾರ್ಪಿಯೋ ವಾಹನದಲ್ಲಿ ಅಟ್ಟಾಡಿಸಿದ್ದು, ಬೋಳಾರ ವಿಕ್ಕಿ ತನ್ನ ಸ್ನೇಹಿತ ಅಭಿಲಾಷ್ ಶೆಟ್ಟಿ ಜತೆಗೆ ಬೈಕಿನಲ್ಲಿ ಪರಾರಿಯಾಗುವ ಯತ್ನದಲ್ಲಿದ್ದರು. ಸ್ಕಾರ್ಪಿಯೋ ವಾಹನ ಬೈಕನ್ನು ಅಟ್ಟಾಡಿಸುತ್ತಿರುವುದನ್ನು ಕುಂಪಲ ಬೈಪಾಸಿನ ಬಳಿ ಬಂದೋಬಸ್ತಿನಲ್ಲಿದ್ದ ಪೊಲೀಸರು ಕಂಡು ಪಿಸಿಆರ್ ವಾಹನಕ್ಕೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರ ವಾಹನ ಅಷ್ಟರಲ್ಲಿ ತೊಕ್ಕೊಟ್ಟು-ವಿಶ್ವವಿದ್ಯಾನಿಲಯ ರಸ್ತೆಯಲ್ಲಿರುವ ವಿನಮ್ರಾ ಬಾರಿನ ಎದುರುಗಡೆ ಬೈಕಿಗೆ ಹಿಂಬದಿಯಿಂದ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಬೋಳಾರ ವಿಕ್ಕಿಯನ್ನು ಯದ್ವಾತದ್ವ ಕಡಿದಿದ್ದಾರೆ. ಈ ವೇಳೆ ಅಭಿಷೇಕ್ ಶೆಟ್ಟಿ ಪರಾರಿಯಾಗಿದ್ದಾನೆ . ಸ್ಥಳಕ್ಕೆ ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ, ಕ್ರೈಂ ಎಸ್.ಐ ರಾಜೇಂದ್ರ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.




