ಬೆಂಕಿ ಹಚ್ಚಿಕೊಂಡಿದ್ದ ಪತ್ನಿಯನ್ನು ರಕ್ಷಿಸಲು ಹೋಗಿದ್ದ ಪತಿಯೂ ಸಾವು
ಬೆಳ್ತಂಗಡಿ : ಕೌಟುಂಬಿಕ ಕಲಹದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಹೊಂದಿದ್ದ ಎರಡು ಮಕ್ಕಳ ತಾಯಿಯಾಗಿರುವ ಗೃಹಿಣಿ, ಉಜಿರೆ ಗ್ರಾಮದ ಇಚ್ಚಾವು ನಿವಾಸಿನಿ ಪೂರ್ಣಿಮ ಅವರು ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೈದುಕೊಂಡ ಘಟನೆ ಉಜಿರೆ ಗ್ರಾಮದ ಇಚ್ಚಾವು ಸನಿಹದ ಪಂಜೊಳಿಮಾರುನಲ್ಲಿ ಸೆ. 27ರಂದು ನಡೆದಿತ್ತು. ಈ ಸಂದರ್ಭದಲ್ಲಿ ಘಟನೆಯ ವೇಳೆ ಮನೆಯಲ್ಲಿದ್ದ ಪತಿ ಸುರೇಶ್ ಅವರು ಪತ್ನಿಯ ಬೆಂಕಿ ನಂದಿಸಲು ಪ್ರಯತ್ನಪಟ್ಟಿದ್ದು ಅವರಿಗೂ ಕೂಡ ಗಂಭೀರ ಸ್ವರೂಪದ ಬೆಂಕಿಯ ಗಾಯಗಳಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಅ. 6ರಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು 2ನೇ ತರಗತಿಯಲ್ಲಿ ಓದುತ್ತಿರುವ ಶ್ರೇಯಾ (8.) ಮತ್ತು 1ನೇ ತರಗತಿಯಲ್ಲಿ ಕಲಿಯುತ್ತಿರುವ ಶ್ರೇಯಸ್ (6) ಎಂಬಿಬ್ಬರು ಮಕ್ಕಳನ್ನು ಹಾಗೂ ತಂದೆ, ಮುವರು ಸಹೋದರರು ಹಾಗೂ ಒರ್ವೆ ಸಹೋದರಿ ಮತ್ತು ಬಂಧುಗಳನ್ನು ಅಗಲಿದ್ದಾರೆ.