ಮೂಡುಬಿದರೆ: ನಮ್ಮ ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡುವುದು ನಮ್ಮ ಕರ್ತವ್ಯ. ಜತೆಗೆ ನೀರಿಲ್ಲದೆ ನಾವು ಬದುಕುವುದು ಅಸಾಧ್ಯ ಆದ್ದರಿಂದ ನೀರನ್ನು ಭೂಮಿಗೆ ಇಂಗಿಸುವ ಮೂಲಕ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡುವಲ್ಲಿಯೂ ನಾವೆಲ್ಲರೂ ಆದ್ಯತೆ ನೀಡಬೇಕಾಗಿದೆ ಎಂದು ಜೈನ್ ಹೈಸ್ಕೂಲಿನ ಶಿಕ್ಷಕ ನಿತೇಶ್ ಬಲ್ಲಾಳ್ ಹೇಳಿದರು.

ಗಾಂಧಿ ಜಯಂತಿ ಪ್ರಯುಕ್ತ ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್ ಟೌನ್, ತಹಸೀಲ್ದಾರರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಆರಕ್ಷಕ ಠಾಣೆ ಮತ್ತು ಮೂಡುಬಿದಿರೆ ಪುರಸಭೆ ಇವುಗಳ ಆಶ್ರಯದಲ್ಲಿ ಶುಕ್ರವಾರ ಮೂಡುಬಿದರೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಸ್ವಚ್ಛತಾ ಆಂದೋಲನ- ನೀರು ಸಂರಕ್ಷಣಾ ಅರಿವು ಮತ್ತು ನೀರು ಸರಬರಾಜು ಸಿಬಂದಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರೋಟರಿ ಕ್ಲಬ್ ಆಫ್ ಮೂಡುಬಿದರೆ ಟೆಂಪಲ್ ಟೌನ್‍ನ ಅಧ್ಯಕ್ಷ ಉಮೇಶ್ ರಾವ್ ಎಂ ಅಧ್ಯಕ್ಷತೆಯಲ್ಲಿ ವಹಿಸಿ ಮಾತನಾಡಿ ನಮ್ಮ ಪರಿಸರದ ಸ್ವಚ್ಛತೆಯೊಂದಿಗೆ ಮನಸ್ಸನ್ನು ಸ್ವಚ್ಛಗೊಳಿಸುವ ಕೆಲಸಗಳು ನಡೆಯಬೇಕಾಗಿದೆ ಎಂದು ಹೇಳಿದರು.
ಮೂಡುಬಿದರೆ ಪುರಸಭಾ ವ್ಯಾಪ್ತಿಯಲ್ಲಿ 20 ವರ್ಷಕ್ಕೂ ಅಧಿಕ ವರ್ಷ ನೀರು ಸರಬರಾಜು ಮಾಡುವ ಗೋಪಾಲ ಸಾಲ್ಯಾನ್, ಬಾಬು, ಸಂಜೀವ, ರುಕ್ಮಿಣಿ ಹಾಗೂ ಆಂತೋಣಿ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್, ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕಲ್ಲಬೆಟ್ಟು, ಜೈನ ಪ್ರೌಢಶಾಲೆ ಮೂಡುಬಿದರೆ, ಸೈಂಟ್ ಥೋಮಸ್ ಪ್ರೌಢಶಾಲೆ ಆಲಂಗಾರು, ರೋಟರಿ ಆಂಗ್ಲ ಮಾಧ್ಯಮ ಶಾಲೆ, ಆಳ್ವಾಸ್ ಕಾಲೇಜು, ಮಹಮ್ಮದೀಯ ಪ್ರೌಢಶಾಲೆ ಕೋಟೆಬಾಗಿಲು ಹಾಗೂ ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತಮ್ಮ ಸಂಸ್ಥೆಗಳ ಬಳಿಯಿಂದ ಸ್ವಚ್ಛತೆಯನ್ನು ಮಾಡುತ್ತಾ ಮೂಡುಬಿದರೆ ಪೇಟೆ ಮೂಲಕ ಹಾದು ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಒಟ್ಟಾಗಿ ಸೇರಿದರು.
ಸಂಯೋಜಕ ವಿನ್ಸೆಂಟ್ ಡಿ’ಕೋಸ್ತಾ ಸ್ವಾಗತಿಸಿದರು. ದೈ.ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ್ ಪಿರೇರಾ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
