ಮೂಡುಬಿದಿರೆ: ಪುರಸಭೆ ಮಾರುಕಟ್ಟೆಯ ಚಿಕನ್ ಸ್ಟಾಲ್ ಸಂಖ್ಯೆ 2ರ ವಿವಾದಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಕೋರ್ಟ್ ಪುರಸಭೆ ಮುಖ್ಯಾಧಿಕಾರಿಗೆ ಗುರುವಾರ ತುರ್ತು ನೋಟಿಸ್ ನೀಡಿ ಅಕ್ಟೋಬರ್ 9ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಚಿಕನ್ ಸ್ಟಾಲ್ 2ರ ವ್ಯಾಪಾರ ಪರವಾನಿಗೆ ಅವಧಿ ಸೆಪ್ಟಂಬರ್ 30ಕ್ಕೆ ಮುಕ್ತಾಯಗೊಂಡಿದ್ದರಿಂದ ಮುಂದೆ ಬಹಿರಂಗ ಏಲಂ ನಡೆಸಿ ಸ್ಟಾಲನ್ನು ಹಂಚುವುದೆಂದು ಹಾಗೂ ಏಲಂ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸದ್ರಿ ಸ್ಟಾಲ್‍ಗೆ ಬೀಗ ಹಾಕುವುದೆಂದು ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಇದರ ವಿರುದ್ಧ ವ್ಯಾಪಾರಿ ಆತೂರ್ ನಝೀಬ್ ಗುರುವಾರ ಕೋರ್ಟ್ ಮೆಟ್ಟಲೇರಿದರು. ಹೊಸ ಮಾರುಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗುವುದಾದರೆ ಸ್ಟಾಲ್ ಬಿಡಲು ಸಿದ್ಧ, ಅಥವಾ ನಿಯಮಾನುಸಾರ ಟೆಂಡರ್ ಕರೆದು ಹಂಚಿಕೆ ಮಾಡುವುದಾದರು ವಿರೋಧವಿಲ್ಲ. ಆದರೆ ನನಗೆ ಯಾವುದೇ ಸೂಚನೆ ನೀಡದೆ ದಿಢೀರ್ ಸ್ಟಾಲ್‍ಗೆ ಬೀಗ ಹಾಕಲು ನಿರ್ಧರಿಸಿರುವುದು ಕಾನೂನು ಬಾಹಿರ. ಹೊಸ ಟೆಂಡರ್ ಕರೆಯುವಲ್ಲಿಯವರೆಗೆ ಹಿಂದಿನ ಸುಂಕದ ಮೇಲೆ ಶೇಖಡಾವಾರು ದರ ಹೆಚ್ಚಿಸಿ ನನಗೆ ಅಂಗಡಿಯನ್ನು ಮುಂದುವರಿಸಿಬೇಕೆಂದು ಅವರು ವಕೀಲ ಚೇತನ್ ಕುಮಾರ್ ಶೆಟ್ಟಿ ಮೂಲಕ ಕೋರ್ಟ್‍ಗೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಪುರಸಭೆ ಮುಖ್ಯಾಧಿಕಾರಿಗೆ ತುರ್ತು ನೋಟಿಸ್ ಜಾರಿ ಮಾಡಿ ಅಕ್ಟೋಬರ್ 9ರಂದು ಕೋರ್ಟ್‍ಗೆ ಹಾಜರಾಗಿ ಪ್ರಕರಣದ ವಿವರ ನೀಡುವಂತೆ ಸೂಚಿಸಿದೆ.
ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಗುರುವಾರ ಚಿಕನ್ ಸ್ಟಾಲ್‍ಗೆ ಬೀಗ ಹಾಕುವ ನಿರ್ಧಾರವನ್ನು ಕೈಬಿಟ್ಟಿದ್ದು ಸಧ್ಯ ಪುರಸಭೆ ಬೀಸೊ ದೊಣ್ಣೆಯಿಂದ ವ್ಯಾಪಾರಿ ಪಾರಾಗಿದ್ದಾರೆ.
