ಮಹಿಳೆಯರ ಅಭಿಪ್ರಾಯ ಮಂಡನೆಗೆ ಅವಕಾಶ : ಡಾ/ ಕುರಿಯನ್
ಮೂಡುಬಿದಿರೆ : ಮಹಿಳಾ ಗ್ರಾಮಸಭೆಗಳು ಇಂದಿನ ದಿನಗಳಲ್ಲಿ ಅವಶ್ಯವಾಗಿದೆ. 10 ವರ್ಷಗಳ ಹಿಂದೆ ತಿರುಗಿ ನೋಡಿದರೆ ಆಗ ಪಂಚಾಯತ್ಗಳಲ್ಲಿ ಮಹಿಳೆಯರಿಗೆ ಅಧಿಕಾರವಿರಲಿಲ್ಲ. ಅಲ್ಲದೆ ಮಹಿಳೆಯರಿಗೆ ಬೇಕಾದ ಯಾವುದೇ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿರಲಿಲ್ಲ. ಆದರೆ ಇಂದು ಮಹಿಳೆಯರಿಗೆ ಅಧಿಕಾರ ಸಿಗುವ ಮೂಲಕ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಲು ಮತ್ತು ಅಭಿಪ್ರಾಯ ಮಂಡನೆಗೆ ಅವಕಾಶ ಸಿಕ್ಕಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.
ಅವರು ತೆಂಕಮಿಜಾರು ಗ್ರಾಮ ಪಂಚಾಯತ್ ವತಿಯಿಂದ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ತೆಂಕಮಿಜಾರು ಗ್ರಾಮ ಪಂಚಾಯತ್ನ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆಯನ್ನು ವಹಿಸಿದ್ದರು.

ಆಳ್ವಾಸ್ ಬಿ.ಎನ್.ವೈ.ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ದೈನಂದಿನ ಬದುಕಿನಲ್ಲಿ ಮಹಿಳೆಯರ ಆರೋಗ್ಯ ಜಾಗೃತಿ” ಎಂಬ ವಿಷಯದ ಕುರಿತು ಮಾತನಾಡಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಂದು ಹೆಚ್ಚಿನ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಇದನ್ನು ಹೋಗಲಾಡಿಸಬೇಕಾದರೆ ಸೊಪ್ಪು ತರಕಾರಿ ಮತ್ತು ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕೆಂದು ಹೇಳಿದ ಅವರು ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸಬೇಕೆಂದು ಸಲಹೆ ನೀಡಿದರು.
ವಕೀಲೆ ಗೌರಿ ಅವರು “ಮಹಿಳೆಯರ ಹಕ್ಕುಗಳು ಮತ್ತು ರಕ್ಷಣೆ” ವಿಷಯದ ಕುರಿತು ಹಾಗೂ “ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆ” ಬಗ್ಗೆ ಆಳ್ವಾಸ್ ಇಂಜಿನಿಯರಿಂಗ್ ಆಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ದುರ್ಗಾಪ್ರಸಾದ್ ಬಾಳಿಗಾ ಮಾಹಿತಿ ನೀಡಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ/ಪೀಟರ್ ಫೆರ್ನಾಡಿಸ್ ಅವರು ಪೈಪ್ ಕಾಂಪೋಸ್ಟ್ ಬಗ್ಗೆ ವೀಡಿಯೋ ಕ್ಲಿಪಿಂಗ್ ಬಿಡುಗಡೆಗೊಳಿಸಿದರು. ಸ್ವಚ್ಛ ಭಾರತ್ ಮಿಷನ್ನ ಮಂಗಳೂರು ಜಿ.ಪಂನ ಜಿಲ್ಲಾ ಸಂಯೋಜಕಿ ಮಂಜುಳಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಬಡಗ ಮಿಜಾರು ಗ್ರಾಮದ ಬಂಗಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶಶಿಕಲಾ ಅವರು ರಾಗ ಸಂಯೋಜನೆ ಮಾಡಿ ಹಾಡಿರುವ ಅಂಗನವಾಡಿ ಶಿಶು ಗೀತೆಗಳ ಸಿಡಿಯನ್ನು ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ ಅವರು ಬಿಡುಗಡೆಗೊಳಿಸಿದರು. ಗ್ರಾಮದ ಇಬ್ಬರು ಮಹಿಳೆಯರಿಗೆ ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಪೈಪ್ಗಳನ್ನು ವಿತರಿಸಲಾಯಿತು.
ಸನ್ಮಾನ : ತೆಂಕಮಿಜಾರು ಗ್ರಾಮದ ಕಡ್ಪಲಗುರಿಯ ನಿವಾಸಿ ನಾಟಿವೈದ್ಯೆ ದೊಂಬಿಬಾಯಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗ್ರಾ.ಪಂ ಉಪಾಧ್ಯಕ್ಷೆ ಹೇಮಾವತಿ ಕುಲಾಲ್ ಉಪಸ್ಥಿತರಿದ್ದರು. ತೆಂಕಮಿಜಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿದರು. ಸಿಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಮಹಿಳೆಯರ ಆರೋಗ್ಯ ತಪಾಸಣೆ ನಡೆಯಿತು.
