ಮಂಗಳೂರು: ಜಗತ್ತಿನಲ್ಲಿ ಗುಜರಾಥ್‍ನ ಗಿರ್ ಅರಣ್ಯ ಹಾಗೂ ಕೆಲವು ವಿಶೇಷ ಮೃಗಾಲಯದಲ್ಲಿ ಮಾತ್ರ ಕಣ ಸಿಗುವ ಏಶ್ಯಾಟಿಕ್ ಸಿಂಹ ಹಾಗೂ ಮರುಭೂಮಿಯಲ್ಲಿ ಕಾಣಸಿಗುವ ಉಷ್ಟ್ರಪಕ್ಷಿಗಳನ್ನು ಎದುರುಗೊಳ್ಳಲು ಪಿಲಿಕುಳ ಸಜ್ಜಾಗಿ ನಿಂತಿದೆ.

ಗುಜರಾತ್‌ನ “ಸಕ್ಕರೆ ಬಾಗ್’ ಪ್ರಾಣಿ ಸಂಗ್ರಹಾಲಯದಿಂದ ಒಂದು ಗಂಡು, ಹೆಣ್ಣು “ಏಶ್ಯಾಟಿಕ್ ಸಿಂಹ’ ಗಳನ್ನು ಪಿಲಿಕುಳಕ್ಕೆ ಕರೆತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಏಶ್ಯಾಟಿಕ್ ವರ್ಗಕ್ಕೆ ಸೇರಿದ ಈ ಸಿಂಹ ಗಳನ್ನು ತರಲು ಪಿಲಿಕುಳದಿಂದ ವೈಜ್ಞಾನಿಕ ಅಧಿಕಾರಿ ಮತ್ತು ವೈದ್ಯಾಧಿಕಾರಿಗಳ ತಂಡ ಶೀಘ್ರದಲ್ಲಿ ಗುಜ ರಾತ್‌ಗೆ ತೆರಳಲಿದೆ.
ಪ್ರಾಣಿಗಳ ವಿನಿಮಯದ ಅಂಗವಾಗಿ ಚೆನ್ನೈನ ವಂಡಲೂರು ಮೃಗಾಲಯದಿಂದ ಹೈಬ್ರಿಡ್ ಗಂಡು ಸಿಂಹ, ರೀಸಸ್ ಕಪಿ ಮತ್ತು ಆಕರ್ಷಕ ಪಕ್ಷಿಗಳನ್ನು ತರಿಸಲಾಗುತ್ತದೆ. ಉಷ್ಟ್ರ ಪಕ್ಷಿ ಕೂಡ ಪಿಲಿಕುಳಕ್ಕೆ ಇದೇ ಸಮಯದಲ್ಲಿ ಬರಲಿದೆ. ಬದಲಾಗಿ ಪಿಲಿಕುಳದಿಂದ 2 ಕಾಳಿಂಗ ಸರ್ಪಗಳು, 6 ಕೃಷ್ಣ ಮೃಗಗಳು, ಮೂರು ವಿಟೇಕರ್ ಜೋವಾಗಳನ್ನು ಕಳುಹಿಸಿ ಕೊಡಲಾಗುತ್ತದೆ.
ಅಳಿವನಂಚಿನ ಪ್ರಾಣಿಗಳ ವೀಕ್ಷಣೆ ಭಾಗ್ಯ ಪಿಲುಕುಳದಲ್ಲಿ ಸಿಗಲಿದೆ. ಆ ಪ್ರಾಣಿಗಳಿಗೆ ತಕ್ಕಂತೆ ಹವಾಗುಣ ಹಾಗೂ ಆಹಾರ ಪೂರೈಸಲು ಅಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ.

