ನವದೆಹಲಿ: ಮಹಾಭಾರತ ಹಾಗೂ ರಾಮಾಯಣ, ಶ್ರೀರಾಮನಿಗೆ ಸಂಬಂಧಪಟ್ಟ ವಿಷಯಗಳು ಇತಿಹಾಸಕಾರರು, ವಿಜ್ಞಾನಿಗಳು, ವಿಶ್ಲೇಷಣಕಾರರ ನಡುವೆ ಜಿಜ್ಞಾಸೆ ಇನ್ನೂ ಮುಂದುವರಿದಿರುವ ನಡುವೆಯೇ, ಶ್ರೀರಾಮಚಂದ್ರ ಯಾವಾಗ ಜನಿಸಿದ್ದಾನೆ? ಮಹಾಭಾರತದ ಯುದ್ಧ ಯಾವಾಗ ಪ್ರಾರಂಭವಾಯಿತು? ಹೀಗೆ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಮಹತ್ವದ ಮಾಹಿತಿ ಹೊರಬಿದ್ದಿದೆ.
ಶ್ರೀರಾಮಚಂದ್ರ ಕ್ರಿಸ್ತ ಪೂರ್ವ 5114 ಜನವರಿ 10ರಂದು ಜನಿಸಿದ್ದಾನೆ. ಕ್ರಿಸ್ತ ಪೂರ್ವ 3139ರ ಅಕ್ಟೋಬರ್ 13ರಂದು ಮಹಾಭಾರತ ಯುದ್ಧ ಆರಂಭವಾಯಿತು. ಕ್ರಿಸ್ತ ಪೂರ್ವ 5076ರ ಸೆಪ್ಟೆಂಬರ್ 12ರಂದು ಅಶೋಕ ವನದಲ್ಲಿ ಹನುಮಂತ ಸೀತೆಯನ್ನು ಭೇಟಿ ಮಾಡಿದ್ದನಂತೆ.
ಅರೇ ಇದೇನಪ್ಪಾ….ಕರಾರುವಕ್ಕಾಗಿ ಮಹಾಭಾರತ, ರಾಮಾಯಣದ ದಿನಾಂಕವನ್ನು ಹೇಳುತ್ತಿದ್ದಾರಲ್ಲ ಎಂದು ಹುಬ್ಬೇರಿಸ್ಬೇಡಿ…ಹೌದು ದೇಶದ ಹಾಗೂ ವಿದೇಶಿ ಇತಿಹಾಸಕಾರರು ಖಚಿತವಾಗಿ ಹೇಳಲು ಅಸಾಧ್ಯ ಎಂದೇ ಹೇಳಿದ್ದ ವಿಷಯದ ಬಗ್ಗೆ ವೈಜ್ಞಾನಿಕ ಸಂಶೋಧನಾ ಸಂಸ್ಥೆಯೊಂದು ತಾನು ಸಾಧಿಸಿರುವುದಾಗಿ ಹೇಳಿಕೊಂಡಿದೆ.
ಈ ಸಂಸ್ಥೆ ಏರ್ಪಡಿಸಿದ್ದ ಋಗ್ವೇದದಿಂದ ರೋಬೋಟಿಕ್ಸ್ ವರೆಗೆ ಎಂಬ ಸಂಸ್ಕೃತಿಯ ವಿಶಿಷ್ಟ ಪ್ರದರ್ಶನದಲ್ಲಿ ತನ್ನ ಸಂಶೋಧನೆಯನ್ನು ಅನಾವರಣಗೊಳಿಸಿದೆ.
ಅಷ್ಟೇ ಅಲ್ಲ ಈ ಸಂಶೋಧನಾ ಪ್ರದರ್ಶನದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಕಳೆದಿರುವ ಭಾರತದ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ, ನಮ್ಮ ಇಲಾಖೆ ಈ ಎಲ್ಲಾ ಮಾಹಿತಿ ಮತ್ತು ವರದಿಯನ್ನು ಕೋರಿರುವುದಾಗಿ ತಿಳಿಸಿದ್ದಾರೆ.
ಋಗ್ವೇದ, ರಾಮಾಯಣ ಮತ್ತು ಮಹಾಭಾರತಗಳ ಕುರಿತು ನಿಖರ ದಿನಾಂಕಗಳನ್ನು ಕಂಡು ಹಿಡಿಯಲು ಗ್ರಹಮಂಡಲದ ಮಾಹಿತಿಯನ್ನು ಆಧರಿಸಿರುವುದಾಗಿ ಸಂಸ್ಥೆಯ ನಿರ್ದೇಶಕ ಸರೋಜ್ ಬಾಲಾ ವಿವರಿಸಿದ್ದಾರೆ.

