ಕೈಕಂಬ : ಕಂಬಳದ ಅಸಲಿ ರೂಪವಾದ ಗದ್ದೆಗೆ ಬಾಳೆ ನೆಡುವ ಕ್ರಮ ಮಳಲಿ ಸಮೀಪದ ಉಳಿಪಾಡಿಗುತ್ತುವಿನ ಕಂಬಳದ ಗದ್ದೆಯಲ್ಲಿ ಸಾಂಕೇತಿಕವಾಗಿ ನಡೆಯಿತು. ಅಲ್ಲಿ ವಿಜ್ರಂಭಣೆ ಇರಲಿಲ್ಲ, ಆಡಂಬರವಿರಲಿಲ್ಲ, ಬ್ಯಾಂಡ್ ವಾದ್ಯಗಳ ಸಂಗೀತವಿರಲಿಲ್ಲ. ಅನಾದಿ ಕಾಲದಿಂದ ಬರುತ್ತಿದ್ದ ಸಂಪ್ರದಾಯದಂತೆ ಕಂಬಳದ ಗದ್ದೆಗೆ ಬಾಳೆ ಗಿಡ ನೆಡುವ ಮೂಲಕ ಸಂಪ್ರದಾಯಿಕವಾಗಿ ಬುಧವಾರ ಆಚರಿಸಲಾಯಿತು.


ಉಳಿಪಾಡಿ ಗುತ್ತುವಿನಲ್ಲಿ ಬಬ್ಬು ದೈವಸ್ಥಾನವಿರುದರಿಂದ ಆ ದೈವಸ್ಥಾನದಲ್ಲೆ ಉಂಬಳಿ ಬಿಟ್ಟ ಉಳಿಪಾಡಿಗುತ್ತುವಿನ ವಿಶಾಲವಾದ ಗದ್ದೆಯಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ಬಾಳೆ ನೆಡುವ ಕ್ರಮ ಜರುಗುತ್ತಿತ್ತು. ನೂರಾರು ಮಂದಿ ಊರಿನವರು ಬಂದು ಅಲ್ಲಿ ಸೇರಿ, ಮಾಂಸದೂಟ ಸವಿದು ಹೋಗುತ್ತಿದ್ದರು.
ಕಂಬಳದ ಆರಂಭದಲ್ಲಿ ಕಂಬಳದ ಗದ್ದೆಯ ಸಮೀಪದಲ್ಲಿನ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ದೈವದ ಪರಿಚಾರಕ (ತುಳುವಲ್ಲಿ ಮಾಣಿ) ಪೂಜೆ ಸಲ್ಲಿಸುತ್ತಾನೆ. ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ಪ್ರಸಾದ, ಸೀಯಾಳ ಹಿಡಿದುಕೊಂಡು ಗುತ್ತಿನ ಮನೆಗೆ ತೆರಳಿ ಅಲ್ಲಿ ಶೆಟ್ಟರು ಪೂಜೆ ಸಲ್ಲಿಸುತ್ತಾರೆ. ಬಬ್ಬು ದೈವದ ಮಾಣಿಗೆ ದೈವ ಆಪೋಷನವಾಗಿ ದರ್ಶನದಲ್ಲಿ ಕಂಬಳದ ಗದ್ದೆಯತ್ತ ತೆರಳುತ್ತಾನೆ. ಜೊತೆಗೆ ಇಬ್ಬರು ಸಹಾಯಕ ಮಾಣಿಗಳು. ಗಂಬಳದ ಗದ್ದೆಯ ಯಜಮಾನರು ಮುಂದಿನ ಸಾಲಿನಲ್ಲಿ ಗತ್ತಿನಿಂದ ಸಾಗಿ, ಹಿಂದಿನಿಂದ ಮಾಣಿ ದೈವ ದರ್ಶನದಲ್ಲಿ ಬರುತ್ತಾನೆ.
ಗದ್ದೆಯು ಬದಿಯಲ್ಲಿ ಮೊದಲೇ ಇಟ್ಟಿದ್ದ ಬಾಳೆಗಿಡವನ್ನು ಗುತ್ತಿನ ಮನೆಯ ಶೆಟ್ಟರು ಮಾಣಿಯ ಕೈಗೆ ಕೊಡುತ್ತಾರೆ. ಮಾಣಿ ಆವೇಶದಿಂದ ಬಂದು ಗದ್ದೆಗೆ ಇಳಿದು ಗದ್ದೆಯ ಮಧ್ಯ ಭಾಗಕ್ಕೆ ಬಂದು ಅಲ್ಲೇ ಮೂರು ಸುತ್ತ ಬಂದು ಬಾಳೆಗಿಡ ನೆಡುತ್ತಾರೆ. ಬಾಳೆ ಗಿಡ ಕೆಳಕ್ಕೆ ಬೀಳದಂತೆ ಅದಕ್ಕೆ ಆಧಾರವಾಗಿ ಕೆಲವೊಂದು ಕಂಬ ಇಡುತ್ತಾರೆ.
ಈ ಗಿಡಕ್ಕೆ ಮೂರು ಸುತ್ತು ಬಂದು, ಬೆಳೆ ಚೆನ್ನಾಗಿ ಬರಲಿ ಎಂದು ದೈವದಲ್ಲಿ ಪ್ರಾರ್ಥಿಸಿ ವಾಪಸ್ ಬರುತ್ತಾರೆ. ಇದೆಲ್ಲಾ ಆದ ಮೇಲೆ ಪರಿಚಾರಕನ ಮೈಮೇಲೆ ಬಂದಿದ್ದ ದೈವದ ಆವೇಶ ಹೊರಟುಹೋಗುತ್ತದೆ.
ಬಾಳೆ ನೆಡುವ ಮುಂಚೆ ನೇಜಿ ನೆಡಲಾಗುತ್ತದೆ. ಆದರೆ ದೈವದ ಪರಿಚಾರಕ ಬಾಳೆ ಗಿಡ ಹಿಡಿದುಕೊಂಡು ಬರುವ ಮುನ್ನ ನೇಜಿ ನೆಡುವ ಹೆಂಗಸರು ಗದ್ದೆಯಿಂದ ಮೇಲಕ್ಕೆ ಹೋಗಬೇಕು. ಅಲ್ಲದೆ ಪರಿಚಾರಕನ ಮುಂದೆ ಬೇರೆ ಯಾರೂ ಕೂಡಾ ಅಡ್ಡ ಬರಬಾರದು ಎಂಬ ಸಂಪ್ರದಾಯವಿದೆ. ಬಾಳೆ ನೆಟ್ಟ ಬಳಿಕ ಹೆಂಗಸರು ಮತ್ತೆ ನೇಜಿ ನೆಡಲು ಮುಂದೆ ಬರುತ್ತಾರೆ.
ಈ ಹಿಂದೆ ಬಾಳೆ ನೆಡುವ ಮುನ್ನ ದಲಿತರು ಡೋಲು, ಡಕ್ಕೆ ಬಡಿಯುತ್ತಿದ್ದರು. ಮಧ್ಯಾಹ್ನದ ವೇಳೆ ಭರ್ಜರಿ ಊಟ ಊರವರಿಗೆ ಬಡಿಸಲಾಗುತ್ತಿತ್ತು. ನೇಜಿ ನೆಡಲು ಬರುವ ಮಹಿಳೆಯರಿಗೆ ಅಕ್ಕಿ ಜಾಸ್ತಿ ಕೊಡುತ್ತಿದ್ದರಿಂದ ಮಹಿಳೆಯರು ಕೂಡಾ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದರಿಂದ ಈ ಕಾರ್ಯಕ್ಕೆ ಜನರು ಸಿಗುತ್ತಿಲ್ಲ. ಅಲ್ಲದೆ ಇತ್ತೀಚೆಗೆ ಕಂಬಳ ಎಂಬುವುದು ಜೂಜಾಗಿ ಪರಿವರ್ತನೆಗೊಂಡಿರುವುದರಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ಕಂಬಳ ಸಂಪ್ರದಾಯ ನಶಿಸುತ್ತಿದೆ. ಆದರೂ ದೈವದ ಸೇವೆ ಎಂಬಂತೆ ಕಾಟಾಚರಕ್ಕೆಂದು ಸಾಂಕೇತಿಕವಾಗಿ ಅಲ್ಲಲ್ಲಿ ನಡೆಯುತ್ತಿದೆ.
.ಗಿರೀಶ್ ಮಳಲಿ




