ಮಂಗಳೂರು: ಎತ್ತಿನಹೊಳೆ ತಿರುವು ಯೋಜನೆಯ ವಿರುದ್ಧ ಸರ್ವ ಕಾಲೇಜು ವಿದ್ಯಾರ್ಥಿವತಿಯಿಂದ ಸೆ.19ರಂದು ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸಲು ಸರ್ವ ಕಾಲೇಜ್ ಸಂಘ ತೀರ್ಮಾನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ, ಎತ್ತಿನ ಹೊಳೆ ಯೋಜನೆ ಯನ್ನು ಸರಕಾರ ಕೈ ಬಿಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಅರಣ್ಯ ಸಚಿವರಿಗೆ ಅರಣ್ಯ ಇಲಾಖೆಯ ಮಾಹಿತಿಯೇ ತಿಳಿದಿಲ್ಲ. ಅರಣ್ಯ ನಿಯಮ ಉಲ್ಲಂಘಿಸಿ ಎತ್ತಿನಹೊಳೆ ಯೋಜನೆ ಆರಂಭವಾಗಿದ್ದರೂ ಸಚಿವರು ಚಕಾರವೆತ್ತುತ್ತಿಲ್ಲ. ಜಿಲ್ಲೆಗೆ ಒದಗಿರುವ ಸಮಸ್ಯೆಯನ್ನು ಬಗೆಹರಿಸಿ ನೇತ್ರಾವತಿಯನ್ನು ಉಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಎದ್ದೇಳು ದಕ್ಷಿಣ ಕನ್ನಡ ಎದ್ದೇಳು’ ಎನ್ನುವ ಘೋಷ ವಾಕ್ಯದೊಂದಿಗೆ ಮತ್ತು ಕರಪತ್ರದೊಂದಿಗೆ ಜನತೆಯನ್ನು ಎಚ್ಚರಿಸುವ ಕೆಲಸ ಮಾಡಲಿದೆ. ಸೆ.19ರಂದು 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ದಿನಕರ ಶೆಟ್ಟಿ ತಿಳಿಸಿದರು.

