ಮುಖ್ಯಮಂತ್ರಿಯಿಂದ ಸನ್ಮಾನಿಸಲ್ಪಟ್ಟ ಕರ್ನಿರೆ ವಿಶ್ವನಾಥ ಶೆಟ್ಟಿ-ಡಾ| ಶಿವರಾಮ ಭಂಡಾರಿ
ಮುಂಬಯಿ: ಮೌಲನಾ ಅಜ್ಹಾದ್ ನೇಶನಲ್ ಅಕಾಡೆಮಿ ಫಾರ್ ಸ್ಕಿಲ್ಸ್(ಮಾನಸ್) ಸಂಸ್ಥೆಯು ಭಾರತ ಸರಕಾರದ ಅಲ್ಪಸಂಖ್ಯಾತ ಸಚಿವಾಲಯ (ಮಿನಿಸ್ಟ್ರಿ ಆಫ್ ಮೈನಾರಿಟಿ ಅಫೇರ್‍ಸ್, ಗ್ಹವರ್ನ್‍ಮೆಂಟ್ ಆಫ್ ಇಂಡಿಯಾ) ಸಹಯೋಗದೊಂದಿಗೆ ಆಯೋಜಿಸಿದ್ದ ಕೌಶಲ್ಯ ತರಬೇತಿ ಸಮಾರೋಪ ಸಮಾರಂಭವು ಇಂದಿಲ್ಲಿ ಶುಕ್ರವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಸಮಾಪನಗೊಂಡಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತ ಸರಕಾರದ ಅಲ್ಪಸಂಖ್ಯಾತ ಖಾತೆ ಸಚಿವೆ ಡಾ| ನಜ್ಮಾ ಎ.ಹೆಪ್ತುಲ್ಲಾ ಅವರು ಕೌಶಲ್ಯ ತರಬೇತಿ ಪ್ರಮಾಣಪತ್ರ ಹಾಗೂ ತರಬೇತಿಯಲ್ಲಿ ಪಾಲ್ಗೊಂಡ ಚಾತುರ್ಯ ವಿಕಾಸಿತರಿಗೆ ಸಾಹಸೋದ್ಯಮ ಸಹಭಾಗಿಗಳಿಗೆ ಸಾಲವನ್ನು ಪ್ರದಾನಿಸಿದರು. ಬಳಿಕ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ಬಗ್ಗೆ ಮಾಹಿತಿಯನ್ನಿತ್ತರು. ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿದೇವೇಂದ್ರ ಫಡ್ನಾವಿಸ್ ಮಹಾರಾಷ್ಟ್ರ ಸರಕಾರದ ಯೋಜನೆ ಯಾದ ಆನ್‍ಲೈನ್ ಎಜ್ಯುಕೇಶನ್ ಲೋನ್ ಮ್ಯಾನೇಜ್‍ಮೆಂಟ್ ಸಿಸ್ಟಂಗೆ ಚಾಲನೆಯನ್ನಿತ್ತರು. ರಾಜ್ಯ ಖಾತೆ ಸಚಿವ ದಿಲೀಪ್ ಕಾಂಬ್ಳೆ, ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಮಹ್ಮದ್ ಹುಸೈನ್ ಖಾನ್ ಉಪಸ್ಥಿತರಿದ್ದರು. ಕೌಶಲ್ಯ ತರಬೇತಿಗಾಗಿ ಅನನ್ಯ ಸೇವೆಯನ್ನಿತ್ತ ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತನಿರ್ದೇಶಕ ಅತ್ತೂರು ಡಾ| ಶಿವರಾಮ ಕೆ.ಭಂಡಾರಿ ಹಾಗೂ ತರಬೇತುದಾರರಿಗೆ ಮುಖ್ಯಮಂತ್ರಿದೇವೇಂದ್ರ ಫಡ್ನಾವಿಸ್ ಸನ್ಮಾನಿಸಿ ಗೌರವಿಸಿದರು. ಅತಿಥಿವರ್ಯರು ಆಗಮಿಸುತ್ತಿದ್ದತೆಯೇ ಮೌಲನಾ ಅಬ್ದುಲ್ ಕಲಾಂ ಅಜ್ಹಾದ್ ಅವರ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಗೌರವಿವಿಸಿದರು. ಮಾನಸ್ ಕಾರ್ಯಾಧ್ಯಕ್ಷ ಹಾಗೂ ಭಾರತ ಸರಕಾರದ ಅಲ್ಪಸಂಖ್ಯಾತ ಸಚಿವಾಲಯ ಜತೆ ಕಾರ್ಯದರ್ಶಿ ಡಿ.ಎಸ್ ಬಿಸ್ತ್ ಸ್ವಾಗತಿಸಿದರು. ನೇಶನಲ್ ಮೈನಾರಿಟಿಸ್ ಡೆವಲಪ್‍ಮೆಂಟ್ ಎಂಡ್ ಫೈನಾನ್ಸ್ ಕಾರ್ಪೊರೇಶನ್‍ನ ಆಡಳಿತ ನಿರ್ದೇಶಕ ಮೊಹ್ಮದ್ ಶಹಬಜ್ಹ್ ಆಲಿ ವಂದಿಸಿದರು.














