ಬಂಟ್ವಾಳ: ಎತ್ತಿನ ಹೊಳೆ ಯೋಜನೆಯ ವಿರುದ್ದ ಬುಧವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ರವರು ಸಭಾಧ್ಯಕ್ಷತೆ ವಹಿಸಿದ್ದರು. ವಿಷಯ ಪ್ರಸ್ತಾಪಿಸಿದ ಸದಸ್ಯ ದೇವದಾಸ ಶೆಟ್ಟಿಯವರು, ಪುರಸಭೆಯ ಮಡಿಲಲ್ಲೇ ನೇತ್ರಾವತಿ ನದಿ ಹರಿಯುತ್ತಿದ್ದರೂ ಭವಿಷ್ಯದಲ್ಲಿ ಬಂಟ್ವಾಳ ಪುರಸಭೆ ಯಲ್ಲೂ ನೀರಿನ ತಾತ್ವಾರ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ದ.ಕ.ಜಿಲ್ಲಾ ಉಸ್ತುವಾರಿ ಸಚಿವರು ಕುಡಿಯುವ ನೀರಿನ ಅಭಾವದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಹಾಗಾಗಿ ನೇತ್ರಾವತಿ ನದಿಯಲ್ಲಿ ನೀರಿಲ್ಲದಿದ್ದರೆ ಕುಡಿಯುವ ನೀರಿನ ಬಗ್ಗೆ ಯಾವುದೇ ಯೋಜನೆ ಅನುಷ್ಠಾನಗೊಂಡರೂ ಪುರವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ರಾಜಕೀಯ ವನ್ನು ಬದಿಗಿಟ್ಟು ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಪಕ್ಷ ಬೇಧಮರೆತು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಯಿತು.


ಆದ್ಯತೆಯ ಮೇಲೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಚಿವ ರೈ ಸೂಚನೆ;
ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರನ ಪರಿಹರಿಸುವ ನಿಟ್ಟಿನಲ್ಲಿ ಮಂಜೂರಾದ 52 ಕೋಟಿ ರೂ ವೆಚ್ಚದ 2ನೇ ಹಂತದ ಯೋಜನೆ ಹಾಗೂ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ನಿಟ್ಟಿನಲ್ಲಿ, ಪುರಸಭಾ ಸರ್ವಸದಸ್ಯರು ಹಾಗೂ ಅಧಿಕಾರಿಗಳು ಆದ್ಯತೆಯನ್ನು ನೀಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ.ನ.ನೀ.ಸ ಮತ್ತು ಒ.ಚ.ಮಂಡಳಿಯ ಅಧಿಕಾರಿ ಶೋಭಾ ಅವರು, ಈ ಎರಡು ಯೋಜನೆಯ ಅನುಷ್ಠಾನಕ್ಕೆ ತೊಡಕಾಗುವ ಅಂಶಗಳನ್ನು ಪ್ರಸ್ತಾಪಿಸಿ ಸಚಿವರ ಗಮನ ಸೆಳೆದರು. ಇದಕ್ಕೆಪ್ರತಿಕ್ರಿಯಿಸಿದ ಸಚಿವರು, ಹಿಂದೆ ಆಗಿರುವ ಲೋಪವನ್ನು ಮತ್ತೆ ಕೆದಕದೆ, ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಲು ಪುರಸಭಾ ಮುಖ್ಯಾಧಿಕಾರಿಯವರಿಗೆ ಸೂಚಿಸಿದರು.
ಪುರಸಭಾ ಕಛೇರಿ ಎದುರೇ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಾಣವಾಗುತ್ತಿದ್ದು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಅನುಮತಿ ನೀಡುತ್ತಿರುವುದನ್ನು ಸದಸ್ಯ ಗೋವಿಂದ ಪ್ರಭು ಅವರು, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ತಾನು ಅಧ್ಯಕ್ಷನಾಗಿದ್ದಾಗ ತಿರಸ್ಕøತಗೊಂಡಿದ್ದ ಕಾನೂನು ಬಾಹಿರ ಕಟ್ಟಡಗಳ ಕಡತಗಳನ್ನು ಇದೀಗ ಮತ್ತೆ ತೆರೆದುಕೊಂಡು ಪರವಾನಿಗೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಸದಸ್ಯರಾದ ಮಹಮ್ಮದ್ ಶರೀಫ್ ಅವರು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರನ್ನು ಬೊಟ್ಟು ಮಾಡಿ ಮಾತನಾಡಿ, ಪ್ರಾಧಿಕಾರದಲ್ಲಿ ಬ್ರೋಕರ್ ಗಳ ಹಾವಳಿ ಮಿತಿ ಮೀರಿದೆ. ಬ್ರೋಕರ್ ಗಳೇ ಕಟ್ಟಡಕ್ಕೆ ಸಂಬಂಧಿಸಿದ ಕಡತಗಳನ್ನು ಹಿಡಿದುಕೊಂಡು ಟೇಬಲ್ ನಿಂದ ಟೇಬಲ್ ಗೆ ಅಲೆದಾಡುತ್ತಿದ್ದಾರೆ. ಇದನ್ನು ನಿಯಂತ್ರಿಸದಿದ್ದರೆ ತಾವೇ ಕಡಿವಾಣ ಹಾಕಲು ಮುಂದಾಗಬೇಕೆಂದು ಎಚ್ಚರಿಸಿದರು. ಸದಸ್ಯರಾದ ಸದಾಶಿವ ಬಂಗೇರ, ವಾಸು ಪೂಜಾರಿ ಇದಕ್ಕೆ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಅಕ್ರಮ ಕಟ್ಟಡಗಳ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಬಾರೆಕಾಡಿ ನಲ್ಲಿರುವ ಆಶ್ರಯ ಕಾಲೊನಿಯಲ್ಲಿ ಕಳೆದ 25 ವರ್ಷಗಳಿಗಿಂತ ಹೆಚ್ಚು ಕಾಲ ವಾಸ್ತವ್ಯವಿರುವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಸದಸ್ಯ ವಾಸು ಪೂಜಾರಿ ಒತ್ತಾಯಿಸಿದರು.
ಪ್ರತಿಧ್ವನಿಸಿದ ಕಸ..!
ಪುರಸಭಾ ವ್ಯಾಪ್ತಿಯ ಕಸ ಸಮಸ್ಯೆಯ ಚರ್ಚೆ ಬಾರಿಯ ಪುರಸಭಾ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದೆ. ಕಸ ವಿಲೇವಾರಿಯಾಗದ ಬಗ್ಗೆ ದೂರು ಪೆಟ್ಟಿಗೆಗೆ ಹಲವು ದೂರುಗಳನ್ನು ದಾಖಲಿಸಿದರೂ ಇದಕ್ಕೆ ಯಾವುದೇ ಸ್ಪಂದನ ನೀಡದಿರುವ ಬಗ್ಗೆ ಸದಸ್ಯರಾದ ದೇವದಾಸ ಶೆಟ್ಟಿ ಹಾಗೂ ಗೋವಿಂದ ಪ್ರಭು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇವರ ದೂರಿನ ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ಸದಾಶಿವ ಬಂಗೇರ ಹಾಗೂ ಮಹಮ್ಮದ್ ನಂದಬೆಟ್ಟು ಅಧಿಕಾರಿಗಳನ್ನು ಒತ್ತಾಯಿಸಿದರು. ಇದೇ ವೇಳೆ ಪ್ರತಿಕ್ರಿಯಿಸಿದ ದೇವದಾಸ ಶೆಟ್ಟಿಯವರು ಮುಂದಿನ 8 ದಿನದ ಒಳಗಾಗಿ ವಾರ್ಡ್ 4 ರಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದೇ ಇದ್ದರೆ ಎಲ್ಲಾ ಕಸವನ್ನು ಸಂಗ್ರಹಿಸಿ ಕಛೇರಿ ಮುಂದೆ ಸುರಿಯುವುದಾಗಿ ಎಚ್ಚರಿಸಿದರು.
ಪುರಸಭೆಯ ದಿನಗೂಲಿ ನೌಕರರಿಗೆ ಕನಿಷ್ಟ ವೇತನ 10 ಸಾವಿರ ರೂ. ನೀಡುವ ಭರವಸೆ ಈಡೇರದೇ ಇದ್ದು ಮುಂದಿನ ತಿಂಗಳು ಈ ವೇತನವನ್ನು ಹೆಚ್ಚಿಸದೇ ಇದ್ದಲ್ಲಿ ಕಾರ್ಮಿಕರ ನ್ಯಾಯಾಲಯದ ಮುಂದೆ ಮುಖ್ಯಾಧಿಕಾರಿಯವರ ವಿರುದ್ದ ದಾವೆ ಹೂಡುವುದಾಗಿ ಗೋವಿಂದ ಪ್ರಭು ಅವರು ಎಚ್ಚರಿಸಿದರು.
ಉಪಾಧ್ಯಕ್ಷೆ ಯಾಸ್ಮೀನ್, ಸದಸ್ಯರಾದ ಜಗದೀಶ್ ಕುಂದರ್, ಮೊನಿಶ್ ಆಲಿ, ಇಕ್ಬಾಲ್ ಗೂಡಿನ ಬಳಿ, ಪ್ರವೀಣ್ ಬಿ, ಗಂಗಾಧರ್, ಬಿ.ಮೋಹನ್ ಭಾಸ್ಕರ್ ಟೈಲರ್, ಚಂಚಲಾಕ್ಷಿ, ಸುಗುಣ ಕಿಣಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

