ಮೂಡುಬಿದರೆ:ಮಾರ್ಪಾಡಿ ಗ್ರಾಮದ ಮರಿಯಾಡಿ ಸುತ್ತಮುತ್ತ ಬುಧವಾರ ರಾತ್ರಿ ನಾಲ್ಕು ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
ಮಹಮ್ಮದ್ ಹನೀಪ್ ಎಂಬವರ ಮನೆಯ ಹಿಂಬದಿಯ ಕಿಟಕಿಯ ಬಾಗಿಲು ಮುರಿದ ಕಳ್ಳರು ಕಿಟಕಿ ಮೂಲಕ ದೋಟಿಯನ್ನು ಹಾಕಿ ಹಿಂಬಾಗಿಲಿನ ಒಂದು ಚಿಲಕವನ್ನು ತೆಗೆಯಲು ಸಫಲರಾದರು ಇನ್ನೊಂದು ಚಿಲಕ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಹತ್ತಿರದ ಮನೆಯ ಪಿಕ್ಕಾಸು ತಂದು ಕಿಟಕಿಯನ್ನು ಗೋಡೆಯಿಂದ ಬೇರ್ಪಡಿಸುವ ಪ್ರಯತ್ನ ನಡೆಸಿದಾಗ ಹತ್ತರದ ಮನೆಯ ನಾಯಿ ಜೋರಾಗಿ ಬೊಗಳತೊಡಗಿತು. ಆವಾಗ ಹತ್ತಿರದ ಮನೆಯವರು ಎದ್ದು ಹೊರಗಡೆಯ ವಿದ್ಯುತ್ ದೀಪವನ್ನು ಉರಿಸಿದಾಗ ಕಳ್ಳರು ಪರಾರಿಯಾದರು. ಅಲ್ಲಿಂದ ಅನತಿ ದೂರದಲ್ಲಿ ಮೂರು ಮನೆಗಳಿಗೆ ಕಳ್ಳತನಕ್ಕೆ ಯತ್ನ ನಡೆಸಿದ್ದರು ಹಿಂಬಾಗಿಲಿನ ಚಿಲಕವನ್ನು ಸರಿಯಾಗಿ ತೆಗೆಯಲಾಗದೆ ವಾಪಾಸಾಗಿದ್ದರೆ.

ಈ ಎಲ್ಲ ಮನೆಯ ಬಾಗಿಲಿನ ಚಿಲಕ ತೆಗೆಯಲು ಕಳ್ಳರು ಉದ್ದನೆಯ ದೋಟಿ ಉಪಯೋಗಿಸಿದ್ದು ಅದರ ತುದಿಗೆ ಕಬ್ಬಿಣದ ಕೊಕ್ಕೆ ಮತ್ತು ಬ್ಲೇಡನ್ನು ಅಳವಡಿಸಿದ್ದರು. ಒಂದು ಮನೆಯ ಬಾಗಿಲಿನ ಚಿಲಕ ತೆಗೆಯಲು ಕಳ್ಳರು ದೋಟಿಗೆ ಬಟ್ಟೆ ಸುತ್ತಿ ಎಣ್ಣೆ ಹಾಕಿ ಪ್ರಯತ್ನಿಸಿದ್ದಾರೆನ್ನಲಾಗಿದೆ.
ಕಳ್ಳರು ಕೃತ್ಯ ನಡೆಸಲು ಶಾಲೆಯ ಹತ್ತಿರದ ಮನೆಗಳನ್ನು ಉಪಯೋಗಿಸುತ್ತಿದ್ದಾರೆನ್ನಲಾಗಿದೆ. ರಾತ್ರಿ ಶಾಲೆಯಲ್ಲಿ ಬಂದು ಉಳಿದು ಜನ ಸಂಚಾರ ಕಡಿಮೆಯಾದ ನಂತರ ಕಾರ್ಯಾಚರಣೆಗೆ ಇಳಿಯುತ್ತಾರೆ. ಕೃತ್ಯ ನಡೆಸಿದ ನಂತರ ಮತ್ತೆ ಶಾಲೆಗೆ ವಾಪಾಸಾಗಿ ಮುಂಜಾನೆ ಅಲ್ಲಿಂದ ಹೊರಡುತ್ತಾರೆನ್ನಲಾಗಿದೆ. ಮೂಡುಬಿದರೆ ಪರಿಸರದಲ್ಲಿ ಇತ್ತೀಚೆಗೆ ನಡೆದ ಹೆಚ್ಚಿನ ಕಳ್ಳತನಗಳು ಇದೇ ಮಾದರಿಯಲ್ಲಿ ನಡೆದಿವೆ ಎಂದು ಇಲ್ಲಿನ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಮಾಧ್ಯಮಕ್ಕೆ ತಿಳಿಸಿದ್ದಾರೆ.
