ಮೂಡುಬಿದಿರೆ: ಗಂಟಾಲ್ಕಟ್ಟೆ ನಡೆದಿರುವ ಅಹಿತಕರ ಘಟನೆ ಹಾಗೂ ಹಿಂದೂ ಸಂಘಟನೆಯವರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಊರಿನಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರಿಗಿದೆ. ಒಂದು ವೇಳೆ ಅಂತಹ ಘಟನೆಗಳು ಸಂಭವಿಸುವ ಮುನ್ಸೂಚನೆಯಿದ್ದರೂ, ನಾಗರಿಕರು ಕಾನೂನನ್ನು ಕೈಗೊತ್ತಿಕೊಳ್ಳದೆ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಅವಕಾಶ ಮಾಡಿಕೊಡಬೇಕು ಎಂದರು.
102
ಬಿಜೆಪಿ ಮುಖಂಡ ಕೃಷ್ಣರಾಜ ಹೆಗ್ಡೆ ಮಾತನಾಡಿ, ಪೊಲೀಸರು ಎಲ್ಲ ಸಮುದಾಯದವರಿಗೂ ಒಂದೇ ರೀತಿಯಲ್ಲಿ ನ್ಯಾಯ ಒದಗಿಸಿಬೇಕು. ಅಪರಾಧಕ್ಕೆ ಕಾರಣವಾಗುವವರಿಗೆ ಸಮಾಜದಲ್ಲಿ ಯಾರೂ ಬೆಂಬಲಿಸುವುದಿಲ್ಲ. ಪೊಲೀಸರು ಕೂಡ ನಿಷ್ಪಕ್ಷವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಕೆಲವೊಮ್ಮೆ ಅಕ್ರಮಗಳ ವಿರುದ್ಧ ಪೊಲೀಸರಿಗೆ ಮಾಹಿತಿ ಕೊಟ್ಟರೂ, ಅಲ್ಲಿರುವ ಕೆಲವರು ಆರೋಪಿಗಳಿಗೆ ಮಾಹಿತಿಯನ್ನು ರವಾನಿಸುವುದರಿಂದ ಕಾನೂನು ಸುವ್ಯವಸ್ಥೆ ಮಾಡಲು ಅಡಚಣೆಯಾಗುತ್ತಿದ್ದು, ಅಂತವರ ಬಗ್ಗೆ ಪೊಲೀಸ್ ಅಧಿಕಾರಿಗಳು ನಿಗಾವಿರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕ ಮುಖಂಡ ಯಾದವ ಶೆಟ್ಟಿ ಮಾತನಾಡಿ, ಮೂಡುಬಿದರೆಯಲ್ಲಿ ಅಕ್ರಮ ದನ ಸಾಗಾಟದಂತಹ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸರು ಎಷ್ಟು ದೂರು ಬಂದಿದೆ. ಎಷ್ಟು ಪ್ರಕರಣಗಳಿಗೆ ಕಾನೂನು ಕ್ರಮ ಕೈಗೊಂಡಿದ್ದಾರೆ ಎನ್ನುವ ಕುರಿತು ಇನ್ಸ್ಪೆಕ್ಟರ್ ಸ್ಪಷ್ಟೀಕರಣ ನೀಡಬೇಕು ಎಂದರು.

ಕೋಮು ಸೂಕ್ಷತೆಗಳನ್ನು ಅರಿತು, ಯಾವುದೇ ಅಹಿತಕರ ಘಟನೆಗೆ ನಾಂದಿಯಾಡದ ರೀತಿಯಲ್ಲಿ ಮಾಧ್ಯಮಗಳ ವರದಿಯಿರಬೇಕು. ವಾಟ್ಸ್ಅಪ್ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಉದ್ಯಮಿ ಶ್ರೀಪತಿ ಭಟ್ ಅಭಿಪ್ರಾಯಪಟ್ಟರು.
ಮೂಡುಬಿದಿರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಬ್ದುಲ್ ರೆಹ್ಮಾನ್ ಸೌಹಾರ್ದತೆಯ ಕುರಿತು ಮಾತನಾಡಿದರು. ಮಂಗಳೂರು ತಾ.ಪಂ ಸದಸ್ಯ ರುಕ್ಕಯ್ಯ ಪೂಜಾರಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ನಾಮನಿರ್ಧೇಶಿತ ಸದಸ್ಯ ಅಲ್ವಿನ್ ಮೆನೇಜಸ್, ಬಿಜೆಪಿ ಮುಖಂಡ ದೇವಿ ಪ್ರಸಾದ್ ಶೆಟ್ಟಿ, ಯುವಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಸನಿಲ್ ಸಹಿತ ರಾಜಕೀಯ, ಸಾಮಾಜಿಕ ಮುಖಂಡರು ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *