ಬೆಂಗಳೂರು: ಚಿಕ್ಕಮಗಳೂರಿನ ಗಿಡ್ಡೇನಹಳ್ಳಿಯಲ್ಲಿ ತೀವ್ರ ಮಳೆ ಹಾಗೂ ಸಿಡಿಲು ಅಬ್ಬರಿಸಿದ್ದು, ಸಿಡಿಲು ಬಡಿದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಈ ಮಕ್ಕಳ ಜತೆಗಿದ್ದ ಇನ್ನೂ 6 ಮಂದಿಗೆ ಗಾಯವಾಗಿದೆ. ಮಕ್ಕಳು ಆಟವಾಡುತ್ತಿದ್ದಾಗ ದಿಢೀರನೇ ಮಳೆ ಸುರಿದಿದ್ದರಿಂದ ಮರದ ಕೆಳಗೆ ಆಶ್ರಯ ಪಡೆದಿದ್ದರು. ಮರಕ್ಕೆ ಸಿಡಿಲು ಬಡಿದು ಬಸವರಾಜು(13), ಪ್ರಸನ್ನ(14) ಮತ್ತು ಯತೀಶ್(14) ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಆರು ಜನ ಮಕ್ಕಳನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ನಿನ್ನೆ ರಭಸವಾಗಿ ಮಳೆಬಿದ್ದಿದ್ದು, ಭಾರೀ ಗಾಳಿ ಮತ್ತು ಗುಡುಗಿನಿಂದ ಕೂಡಿದ ಮಳೆ ಬಿರುಬಿಸಿಲಿನಿಂದ ಬಸವಳಿದ ಜನರಿಗೆ ತಂಪೆರದರೂ ಕೂಡ ಸಿಡಿಲು ಬಡಿದು ಕೆಲವರಿಗೆ ಮಾರಣಾಂತಿಕವಾಗಿ ಪರಿಣಮಿಸಿತು.

