ಯಶೋಧರ ವಿ.ಬಂಗೇರ
ಮೂಡುಬಿದಿರೆ: ಕೆಲವೊಂದು ಸೌಲಭ್ಯವಿದ್ದರೂ ಉಪಯೋಗಿಸುವವರಿಲ್ಲ, ದೊಡ್ಡ ಪ್ರಮಾಣದ ಸೌಲಭ್ಯ ಬೇಕಾದರೆ ಆಸ್ಪತ್ರೆಯಲಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬೀಡಿ ಕಾರ್ಮಿಕರ ಕಲ್ಯಾಣ ನಿಧಿಯ ಆಸ್ಪತ್ರೆಯ ಶೋಚನೀಯ ಪರಿಸ್ಥತಿಯಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಈ ಆಸ್ಪತ್ರೆಗೆ ಹಲವಾರು ವಿಧದಲ್ಲಿ ಸುಧಾರಣೆಯ ಚಿಕಿತ್ಸೆ ಬೇಕಾಗಿದೆ.

ಮೂಡುಬಿದಿರೆ ಪೇಟೆಯಿಂದ ಎರಡು ಕಿ.ಮೀ ದೂರವಿದ್ದರೂ, ಕಳೆದ 3 ದಶಕಗಳಿಂದ ಮೂಡುಬಿದಿರೆ ಯಲ್ಲಿ ಬೀಡಿ ಕಾರ್ಮಿಕರಿಗೋಸ್ಕರವೇ ಕಾರ್ಯ ನಿರ್ವಹಿಸಿದ್ದರೂ ಹೆಚ್ಚಿನವರಿಗೆ ಈ ಆಸ್ಪತ್ರೆ ಎಲ್ಲಿರುವುದು ಎನ್ನುವುದೇ ಗೊತಿಲ್ಲ.
ಮೂಡುಬಿದರೆ ಪೇಟೆಯಿಂದ ಮಹಾವೀರ ಕಾಲೇಜಿಗೆ ಹೋಗುವ ರಸ್ತೆಯಲ್ಲಿ, ಹಳೆ ಕೋರ್ಟ್ ಪಕ್ಕದಲ್ಲಿ ಈ ಆಸ್ಪತ್ರೆಯಿದೆ. ಸ್ವಂತ ಕಟ್ಟಡವಿಲ್ಲದೇ ಈಗಾಲೂ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ.
ಆಸ್ಪತ್ರೆಯ ವೈದಾಧಿಕಾರಿ ನೀಡುವ ಮಾಹಿತಿ ಪ್ರಕಾರ, ಇಲ್ಲಿ ದಿನಕ್ಕೆ 40ರಷ್ಟು ಕಾರ್ಮಿಕರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದ 4 ದಿನ ಗ್ರಾಮಾಂತರ ಪ್ರದೇಶಗಳ ಕಾರ್ಮಿಕರ ಮನೆಬಾಗಿಲಿಗೆ ಮೊಬೈಲ್ ಚಿಕಿತ್ಸಾ ಘಟಕದ ವ್ಯವಸ್ಥೆಯನ್ನು ಮಾಡಿದ್ದೇವೆ. 14 ಸಾವಿರ ಬೀಡಿ ಕಾರ್ಮಿಕರು ಆರೋಗ್ಯ ಕಾರ್ಡ್ ಪಡೆದಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ನರ್ಸ್ , ವಾಹನ ಚಾಲಕ ಸೇರಿದಂತೆ 5 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಎಷ್ಟು ರೋಗಿಗಳ ಬರುತ್ತಾರೋ ಅವರಿಗೆ ಬೇಕಾದ ಮದ್ದು ಹಾಗೂ ಸೌಲಭ್ಯವಿದೆ ಎನ್ನುತ್ತದೆ ವೈದ್ಯಾಧಿಕಾರಿಯ ಮಾಹಿತಿ.
…
ಔಷದಿಯ ಕೊರತೆ:
ಸಿಐಟಿಯು ವಲಯ ಪ್ರಧಾನ ಕಾರ್ಯದರ್ಶಿ ರಮಣಿ ಮಾಹಿತಿ ನೀಡುತ್ತಾ, ಮೂಡುಬಿದರೆಯಲ್ಲಿರುವ ಬೀಡಿ ಕಾರ್ಮಿಕರ ಆಸ್ಪತ್ರೆಯು ಬಹಳಷ್ಟು ಸುಧಾರಣೆಯಾಗಬೇಕಾಗಿದೆ. ಸಣ್ಣಪುಟ್ಟ ರೋಗಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸೌಲಭ್ಯವಿದ್ದರೂ, ಹೃದಯ ಸಂಬಂಧಿತ ಕಾಯಿಲೆ ಸಹಿತ ಹಲವಾರು ಕಾಯಿಲೆಗಳಿಗೆ ಔಷಧಿಯಿಲ್ಲ. ಪರಿಣಾಮ ಬೇರೆ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗುತ್ತದೆ. ಸಂಘಟನೆಯು ಬೀಡಿ ಕಾರ್ಮಿಕರಿಗೆ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿ, ಇದ್ದ ಸೌಲಭ್ಯವನ್ನು ಉಪಯೋಗಿಸುವಂತೆ ಸಲಹೆ ನೀಡಿದರೂ, ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಕಾರ್ಮಿಕರು ಇಲ್ಲಿ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದಲ್ಲಿ ಆಸ್ಪತ್ರೆ ಮತ್ತಷ್ಟು ಸೊರಗುತ್ತದೆ ಎಂದು ತಿಳಿಸಿದ್ದಾರೆ.
…
ಶುಚಿತ್ವವಿಲ್ಲ.
ಆಸ್ಪತ್ರೆ ಆವರಣದಲ್ಲಿ ಪೊದೆಗಳು ಬೆಳೆದು ನಿಂತಿದ್ದು, ಹಾವು, ಚೇಳುಗಳ ಭಯವಿದೆ. ಆಸ್ಪತ್ರೆಯ ಮುಖ್ಯಧ್ವಾರದ ಬಳಿ ಮಳೆ ನೀರು ನಿಲ್ಲುತ್ತಿದೆ. ಪುರಸಭಾ ಸದಸ್ಯರೂ ಆಗಿರುವ ರಮಣಿ ಅವರು ಈ ಶುಚಿತ್ವದ ಕುರಿತು ಪುರಸಭಾ ಅಧ್ಯಕ್ಷೆ ರೂಪಾ.ಎಸ್.ಶೆಟ್ಟಿ ಅವರ ಬಳಿ ಪ್ರಸ್ತಾಪಿಸಿದ್ದಾರೆ.
……….
ಬೀಡಿ ಕಾರ್ಮಿಕರ ಆಸ್ಪತ್ರೆಗೆ ಸೂಕ್ತ ಸವಲತ್ತುಗಳನ್ನು ನೀಡಿದರೆ ಬೀಡಿ ಕಾರ್ಮಿಕರಿಗೆ ಹೆಚ್ಚು ಅನುಕೂಲಕರವಾಗುತ್ತದೆ. ಹಲವಾರು ಸುಧಾರಣೆಗಳೊಂದಿಗೆ ಸ್ವಂತ ಕಟ್ಟಡದ ಅವಶ್ಯಕತೆಯಿದೆ.
-ರಮಣಿ
ಸಿಐಟಿಯು ಪ್ರಧಾನ ಕಾರ್ಯದರ್ಶಿ
ಮೂಡುಬಿದರೆ ವಲಯ
