ವಿಟ್ಲ: ವಿಟ್ಲಮುಡ್ನೂರು ಮಾಡತ್ತಾರು ನಿವಾಸಿ ಬಿಜೆಪಿ ಮುಖಂಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೇಸಪ್ಪ ಗೌಡ (68) ಅವರು ಅಸೌಖ್ಯದಿಂದ ಭಾನುವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಡ್ಕಿದು ಮಂಡಲ ಪಂಚಾಯಿತಿ ಉಪಪ್ರಧಾನರಾಗಿ, ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ, ಬಂಟ್ವಾಳ ತಾಲೂಕು ಪಂಚಾಯಿತಿ ವಿಟ್ಲ ಭಾಗದ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಸುಮಾರು 40 ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ವಿಟ್ಲಮುಡ್ನೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಿಬರಿಕಲ್ಲ ಮಾಡ ಶ್ರೀ ಮಲರಾಯ ದೈವಸ್ಥಾನಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ತೊರೆದು ಕೆಲವು ಸಮಯ ಜೆಡಿಎಸ್ ಪಕ್ಷದತ್ತ ಒಲವು ತೋರಿದ್ದ ಅವರನ್ನು ಜೆಡಿಎಸ್ಗೆ ಸೇರ್ಪಡೆ ಮಾಡಲು ಕುದ್ದು ಜುಡಿಎಸ್ ಮುಖಂಡ ಕುಮಾರ ಸ್ವಾಮಿ ಇವರ ಮನೆಗೆ ಬೇಟಿ ನೀಡಿ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿರುವುದನ್ನು ಘೋಷಿಸಿದ್ದರು. ಕೆಲವು ಸಮಯದ ಬಳಿಕ ಮತ್ತೆ ಬಿಜೆಪಿಗೆ ಹಿಂತಿರುಗಿದ್ದರು.
ವಿಟ್ಲ ಪೇಟೆಯ ರಸ್ತೆ ವಿಸ್ತರಣೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ಇವರು ಒಂದು ತಿಂಗಳ ಹಿಂದೆ ವಿಟ್ಲ ಪೇಟೆ ಅಭಿವೃದ್ಧಿಯ ಬಗ್ಗೆ ನೈಜ ಕಾಳಜಿ ಹೊಂದಿದ್ದ ಕೆಲವರನ್ನು ಅವರು ಕರೆದು ಮತ್ತೆ ಈ ಬಗ್ಗೆ ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದರು. ಚಂದಳಿಕೆ – ಮಾಡತ್ತಾರು – ಅಜ್ಜಿನಡ್ಕ ರಸ್ತೆ ಡಾಮರೀಕರಣಕ್ಕೆ ಬೇಕಾದ ಅನುದಾನ ತರುವಲ್ಲಿ ಸತತ ಪ್ರಯತ್ನ ನಡೆಸಿದ್ದರು.
ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸೇಸಪ್ಪ ಗೌಡ ಅವರ ನಿಧನರಾದ ಸುದ್ದಿ ತಿಳಿದು ಅವರ ಮಾಡತ್ತಾರು ಮನೆಗೆ ಸಂಸದ ನಳಿನ್ ಕುಮಾರ್ ಕಟೀಲು, ಸಂಜೀವ ಮಟಂದೂರು, ಡಾ| ಪ್ರಸಾದ್ ಭಂಡಾರಿ, ಲಕ್ಷ್ಮಣ ಗೌಡ ಕುಂಟಿಕಾನ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಕೆ. ಎಸ್. ಪ್ರಕಾಶ್ ಉರಿಮಜಲು, ಎಂ.ಹರೀಶ್ ನಾಯಕ್ ಮೊದಲಾದವರು ಬೇಟಿ ನೀಡಿ ಅಂತಿಮ ದರ್ಶನ ಪಡೆದರು.
ಜೆಡಿಎಸ್ ದ.ಕ.ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಕಾರ್ಯದರ್ಶಿ ಜಾಫರ್ಖಾನ್, ವಿಟ್ಲ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ಅಲ್ಪಸಂಖ್ಯಾಕ ವಿಭಾಗದ ಅಧ್ಯಕ್ಷ ವಿ. ಎಸ್. ಇಬ್ರಾಹಿಂ, ಕಿರುತೆರೆ, ಚಲನಚಿತ್ರ ನಟ ವಿಟ್ಲ ಮಂಗೇಶ್ ಭಟ್ ಮೊದಲಾದವರು ಸೇಸಪ್ಪ ಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

