ಆಟಿ ಬಂತು ; ಮನದ ರೋಗ ಕಳೆಯಲು ಅಧುನಿಕ ಮಾರಿ ಬರಲಿ
ಆಟಿ ತಿಂಗಳು ನಿಜವಾಗಿಯೂ ಅತ್ಯಂತ ಕಷ್ಟಕರ ಕಾಲವಾಗಿತ್ತು.ಆದರೆ ಕಾಲಘಟ್ಟ ಬದಲಾಗಿ ಬಡತನ, ರೋಗರುಜಿನಗಳು ಕಡಿಮೆಯಾಗಿದೆ.ತೆರೆದ ಮನೆ ಹೋಗಿ ಮುಚ್ಚಿದ ಬಾಗಿಲುಗಳ ಮನೆಗಳು ಇವೆ.ಮನೆಗಳು ಅಧುನೀಕರಣಗೊಂಡು ಟೆರೆಸ್ ಮನೆ,ಪ್ಲಾಟ್ಗಳು ಬಂದಿದೆ.ಆಟಿಯಲ್ಲಿ ಬರುವ ಕಳೆಂಜ ಸಂಚರಿಸಲು ಹಿಂದಿನ ಕಾಲದಲ್ಲಿದ್ದ ತೆರೆದ ಮನೆಗಳೆ ಇಲ್ಲ. ಕಳೆಂಜ ಆಟಿಯಲ್ಲಿ ಮನೆಗೆ ಬರುವ ಸ್ವರೂಪವೂ ಬದಲಾದರೆ ಒಳ್ಳೆಯದು ಎಂಬುದು ವಿದ್ವಾಂಸದ್ವಯರ ಅಭಿಪ್ರಾಯವಾಗಿದೆ.ಆಟಿ ಕಳೆಂಜ ಮನೆಮನೆಗೆ ಸಂಚರಿಸಿ ಚಾರಿತ್ರಿಕ ಅವಶೇಷವಾಗಿ ಉಳಿದು ಮನದ ಕೊಳೆಯನ್ನು ತೊಳೆಯಬೇಕಾಗಿದೆ.
ವೃತ್ತಿ ಮತ್ತು ಬದುಕಿನ ಸಂಬಂಧವಿಲ್ಲದ ಯಾವುದೇ ಕಲಾ ಪ್ರಕಾರಗಳು ಉಳಿಯುವುದಕ್ಕೆ ಸಾಧ್ಯವಿಲ್ಲ.ಹಾಗಾಗಿ ಆಟಿಯಲ್ಲಿ ಬರುವ ಕಳೆಂಜನಿಗೆ ಚಾರಿತ್ರಿಕ ಮಹತ್ವವಿದೆ.ಕೃಷಿ ಸಂಸ್ಕೃತಿಯಲ್ಲಿ ಆ ರಿತಿಯ ಆಚರನೆಗಳಿಗೆ ಮಹತ್ವ ಇತ್ತು. ಊರಿಗೆ ಬರುವ ಕಾಯಿಲೆಗಳನ್ನು ಮಾಂತ್ರಿಕನ ಮೂಲಕ ಹೊಡೆದೊಡಿಸುತ್ತಿದ್ದರು.ಅದೊಂದು ಮಾಂತ್ರಿಕ ಕುಣಿತ. ಅದನ್ನು ನಾವೀಗ ಕಲಾತ್ಮಕ ದೃಷ್ಟಿಯಿಂದ ಮನರಂಜನೆಗಾಗಿ ನೋಡಬಹುದೆ ಹೊರತು ಆ ಕಾಲಘಟ್ಟಕ್ಕೆ ಮತ್ತು ಇಂದಿಗೆ ಅಜಗಜಾಂತರ ವ್ಯತ್ಯಾಸವಿದೆ.
ಕೃಷಿ ಪ್ರಾಧ್ಯಾನತೆ ಅಳಿದ ಮೇಲೆ ತುಳುನಾಡಿನ ಆಚರಣೆಗಳ ಸ್ವರೂಪಗಳು ಬದಲಾಗಿದೆ.ಬದಲಾದ ಸಂದರ್ಭದಲ್ಲಿ ಅವುಗಳು ಅರ್ಥವನ್ನು ಕಳೆದುಕೊಂಡಿದೆ.ಆದರೆ ಈಗ ವೇಷ ಹಾಕಿ ಹಣ ಮಾಡುವ ಪವೃತ್ತಿಯಿಂದ ಆಟಿಕಳೆಂಜನ ವೇಷಧರಿಸುವುದು ಸ್ವಚ್ಛಂಧ ಲಕ್ಷಣವಲ್ಲ. ವೇದಿಕೆ ಮೇಲೆ ಯಾವ ಜನಾಂಗದವರು ಬೇಕಾದರೂ ಕಳೆಂಜನ ವೇಷಧರಿಸಬಹುದು.ಆ ಕಾಲಘಟ್ಟದ ಸನ್ನೀವೇಶವನ್ನು ಚಾರಿತ್ರಿಕ ಅವಶೇಷವಾಗಿ ತೋರಿಸಬಹುದು ತುಳು ವಿದ್ವಾಂಸ ಚೆನ್ನಪ್ಪ ಗೌಡರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಟಿಕಳೆಂಜ ಈಗಿನ ಕಾಲಘಟ್ಟದಲ್ಲಿ ಪ್ರಸ್ತುತ ಅಲ್ಲದಿದ್ದರೂ ಬಡತನ,ರೋಗ ಕಳೆಯಲು ರಕ್ಕಸ ರೂಪದಲ್ಲಿ ತುಳುನಾಡಿಗೆ ಬಂದ ಅನ್ನುವ ಪ್ರತೀತಿಯಿದೆ.ಅಧುನಿಕ ಕಾಲಘಟ್ಟವನ್ನು ಕಳೆಂಜ ಪ್ರತಿನಿಸಿದರೆ ಸ್ವಲ್ಪಮಟ್ಟಿಗೆ ಪ್ರಯೋಜನಕಾರಿಯಾದೀತು. ಚಾರಿತ್ರಿಕ ಅಂಶಗಳನ್ನು ಉಳಿಸಿಕೊಂಡು ಬದಲಾದ ಕಾಲಮಾನಕ್ಕನುಗುಣವಾಗಿ ಕಲೆ ಮತ್ತು ವೇಷ ಬದಲಾದರೆ ನಾವು ಅದನ್ನು ಒಪ್ಪಿಕೊಳ್ಳಬಹುದು.ಕಳೆಂಜನನ್ನು ಯಾವುದೇ ಒಂದು ಜನಾಂಗ ಪ್ರತಿನಿಸಬೇಕೆಂದೆನಿಲ್ಲ. ಕಲಾವಿದರು ಅದರಲ್ಲಿ ತೊಡಗಿಸಿಕೊಂಡು ನೂತನ ನೃತ್ಯರೂಪಕವಾಗಿ ಅದೇ ಆಶಯದಲ್ಲಿ ಮುಂದುವರಿಸಿದರೆ ಒಳ್ಳೆಯದು ಎಂಬುದು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ ಅವರ ತರ್ಕವಾಗಿದೆ.
ತುಳುವರಲ್ಲಿ ಮಾರಿ ಎಂದರೆ ದೊಡ್ಡ ರೋಗ ಎಂಬಾರ್ಥವಿದೆ.ತುಳುವರ ಆಟಿ ತಿಂಗಳಲ್ಲಿ ಸಾಂಕ್ರಮಿಕ ರೋಗಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ ಎಂಬ ನಂಬಿಕೆಯಿದೆ.ಈ ಆಟಿ ತಿಂಗಳು ಜಾಸ್ತಿ ಮಳೆಯಾಗುವ ಸಮಯ.ಹಾಗಾಗಿ ಕಾಯಿಲೆಗಳು ಜಾಸ್ತಿ ಕಾಣಿಸಿಕೊಳ್ಳುತ್ತದೆ.ಮೂಲಗಳ ಪ್ರಕಾರ ಆಟಿ ತಿಂಗಳು ತುಳುವರಲ್ಲಿ ಭಯ,ಆತಂಕ ಮತ್ತು ಸಂತೋಷವನ್ನು ತರುತ್ತದೆ.ಹವಾಮಾನ ವೈಪರೀತ್ಯದಿಂದಾಗಿ ಜನರ ಮೇಲೂ ತೀವೃತರದ ಪರಿಣಾಮ ಬೀಳುವ ಸಂಕ್ರಮಣ ಕಾಲಘಟ್ಟ ಇದಾಗಿತ್ತು.ಈ ಆಟಿ ತಿಂಗಳಲ್ಲಿ ಕಳೆಂಜ ಎಂಬ ಮಂತ್ರವಿದ್ಯೆ ತಿಳಿದ ವ್ಯಕ್ತಿಯ ಸೃಷ್ಟಿಸಿ ರೋಗರುಜಿನ ದೂರಮಾಡಲು ಪರ್ಯಾಯ ಶಕ್ತಿ ಸೃಷ್ಟಿಸಿಕೊಂಡರು.
ಮೈಯಲ್ಲಿ ಪ್ರೇತ ಬಂದಾಗ ಅದನ್ನು ಕಳೆಯುವ ಸಂಪ್ರದಾಯ ತುಳುವರಲ್ಲು ಹಿಂದಿನಿಂದಲೂ ಇತ್ತು.ಕಳೆಯುವುದು ಎಂದರೆ ಮೈಯಲ್ಲಿ ಬಂದದ್ದನ್ನು ಉಚ್ಚಾಟಿಸುವುದು ಎಂದಾರ್ಥ.ಅದನ್ನು ಉಚ್ಚಾಟಿಸುವವರು ಸಾಮಾನ್ಯವಾಗಿ ಮಂತ್ರವಾದಿಗಳೇ ಆಗಿರುತ್ತಾರೆ.ಈ ರೀತಿಯ ಮಂತ್ರವಾದಿಯ ಕಲ್ಪನೆ ಮೂಂದೆ ಆಟಿಕಳೆಂಜನ ಸ್ವರೂಪ ಪಡೆಯಿತು ಎನ್ನಬಹುದು.ಕಳೆಂಜ ಪದದಲ್ಲಿ ಆಂಜ ಎಂದರೆ ಅಣ್ಣ.ಅಣ್ಣನನ್ನು ವಿಸ್ತರಿಸಿದರೆ ಅಣ್-ಜೇವು ಎಂದಾಗುತ್ತದೆ. ಅಂದರೆ ಕನ್ನಡದ ಪುರುಷ ಎಂದಾಗುತ್ತದೆ.ಆಟಿಯಲ್ಲಿ ವೇಷ ಹಾಕಿ ಬರುವ ಕಳೆಂಜ ಬಿಡುವ ಮೀಸೆ,ಗಡ್ಡದಿಂದ ಈ ಮೇಲಿನ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.ಇವುಗಳನ್ನು ಅಧುನಿಕ ಜನಾಂಗ ಒಪ್ಪುವುದಿಲ್ಲ.ಮೂಡನಂಬಿಕೆ ಈಗ ಕಡಿಮೆಯಾಗಿರುವುದೆ ಇದಕ್ಕೆ ಪ್ರಮುಖ ಕಾರಣ.
ಕೇರಳದಲ್ಲಿ ಇದರ ಕಥೆ ಇನ್ನೂ ಸೊಗಾಸಾಗಿದೆ.ಆಟಿ ಆರಂಭದಿಂದ ಸೋಣದ ವರೆಗೆ ಭೂತಗಳ ಆರಾಧನೆ ತುಳುವರಲ್ಲಿ ಇಲ್ಲ. ಈ ಅವ ಭೂತಗಳ ಬದಲಾಗಿ ಜನರನ್ನು ಸಂರಕ್ಷಿಸುವ ಹೊಣೆಗಾರಿಕೆ ಪರಾಕ್ರಮಿ ಯೋಧನಾದ ಕಳೆಂಜನಿಂದ ಆಗುತ್ತದೆ ಎಂಬ ಮಾತಿದೆ.ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಕಳೆಂಜ ಮನೆ,ಮನೆಗೆ ಸಂಚರಿಸಿ ಹಾಡಿ ಕುಣಿದು ಮನೆಯವರು ನೀಡಿದ ಅಕ್ಕಿ, ಬೇಯಿಸಿದ ಹಲಸಿನ ಬೀಜ ಮೊದಲಾದವುಗಳನ್ನು ಸ್ವೀಕರಿಸಿ ಜೀವನ ನಿರ್ವಹಣೆ ಮಾಡುತ್ತಾನೆ. ಆಟಿಯೆಂದರೆ ತುಳುವರಿಗೆ ಕಷ್ಟಕರ ಕಾಲ.ಹಾಗಾಗಿಯೇ ಕೆಲವು ಜನಾಂಗಗಳು ವೇಷಧರಿಸಿ ಜೀವನೋಪಾಯಕ್ಕೆ ಈ ರೀತಿ ಸಂಚರಿಸುತ್ತಾರೆ ಎಂದು ಬಲ್ಲವರು ಹೇಳುತ್ತಾರೆ. ಇನ್ನೊಂದು ಮೂಲದ ಪ್ರಕಾರ ಪರರಮಾತ್ಮ ಭೂತಗಳನ್ನು ಸೃಷ್ಟಿಸಿ ಭೂಲೋಕಕ್ಕೆ ಕಳುಹಿಸಿದನು.
ಅವುಗಳ ಕಾರ್ಯವೈಖರಿ ತಿಳಿಯಲು ಭಗವಂತ ಕಳೆಂಜನನ್ನು ಸೃಷ್ಟಿಸಿದ ಎಂಬ ವಾದವೂ ಇದೆ.ಹಾಗಾಗಿ ಕಾರ್ತಿಕ ಮಾಸ ಕಳೆದು ಆಷಾಢ ತಿಂಗಳ ಸಂಕ್ರಮಣದಂದು ಕಳೆಂಜನ ಸೃಷ್ಟಿಯಾಯಿತು ಎನ್ನಲಾಗಿದೆ.ಭೂಲೋಕಕ್ಕೆ ಬಂದ ಕಳೆಂಜ ಭೂತಗಳಲ್ಲಿ ಶಕ್ತಿಯಿಲ್ಲ ಎಂಬುದಾಗಿ ಭಗವಂತನಿಗೆ ವರದಿಮಾಡುತ್ತಾನೆ.ಇದರಿಂದ ಕ್ಷುದ್ರಗೊಂಡ ಭೂತಗಳು ಮತ್ತು ಕಳೆಂಜನ ನಡುವೆ ವಾಗ್ವಾದ ಉಂಟಾಯಿತು. ಹಾಗೆ ಭೂತಗಳನ್ನು ಬೆನ್ನಟ್ಟಿ 30 ದಿನಗಳವರೆಗೆ ತುಳುನಾಡಿನಲ್ಲಿ ಕಳೆಂಜ ಅಪತ್ಯ ಸ್ಥಾಪಿಸಿದ ಕತೆಗಳು ಇಲ್ಲಿ ಜನಜನಿತವಾಗಿದೆ. ಹಾಗಾಗಿ ಇಂದಿಗೂ ಆಷಾಢ ಆರಂಭವಾಗುವ ಸಂಕ್ರಮಣದಂದು ಭೂತಗಳ ಗುಡಿಗೆ ಬಾಗಿಲು ಹಾಕಬೇಕು.ಇದು ಕಳೆಂಜ ಮಾಡಿದ ಕಟ್ಟುಕಟ್ಟಳೆ. ಹಾಗಾಗಿ ಇಂದಿಗೂ ಕೆಲವು ಜನಾಂಗ ಕಾಲಿಗೆ ಗಗ್ಗರ, ಸೊಂಟಕ್ಕೆ ಕೆಂಪುಪಟ್ಟಿ, ಬಿಳಿಪಟ್ಟಿಗಳಿರುವ ಲಂಗ ತೆಂಗಿನ ಗರಿಗಳನ್ನು ಮೈಗೆ ಕಟ್ಟಿ ಮೈಮೇಲೆ ಬಣ್ಣದ ಗೆರೆಗಳನ್ನು ಬಳಿದು ಮನೆಮನೆಗೆ ಕಳೆಂಜ ಸಂಚರಿಸುತ್ತಾನೆ.ಅರಸನ ದರ್ಪದಿಂದ ಪ್ರತಿ ಮನೆಯ ಯೋಗಕ್ಷೇಮ ತಿಳಿಯುತ್ತಾನೆ. ಆದರೆ ಈಗಿನ ಕಳೆಂಜ ಅಧುನಿಕರಣಗೊಳ್ಳಬೇಕಾದ ಅನಿವಾರ್ಯತೆ ಇದೆ.
ಡೊಂಬಯ್ಯ ಇಡ್ಕಿದು, ಮಂಗಳೂರು