ಸುರತ್ಕಲ್ : ಹತ್ತು ವರುಷದಿಂದ ಬೆಳೆಯನ್ನೇ ಬೆಳೆಯದ ಪರಿಣಾಮ ಪಾಳು ಬಿದಿದ್ದ ಗದ್ದೆ ಉಳುಮೆಗೊಂಡು ಹೊಸತನದಿಂದ ಕಂಗೊಳಿಸುತ್ತಿದ್ದರೆ, ಈ ಮಳೆಗಾಲದಲ್ಲಿ ಈ ವರೆಗೆ ಬಂದಿಲ್ಲ ಎನ್ನುವಂತೆ ಧೋ ಎಂದು ಸುರಿಯುತ್ತಿದ್ದ ಗಾಳಿ ಮಳೆ, ಕೃಷಿಯ ಜೊತೆ ಬದುಕು ಕಂಡವರ ಮತ್ತು ಕೃಷಿ ಎಂದರೇ ಏನು ಎಂದೇ ತಿಳಿಯದ ಮನಸ್ಸುಗಳ ಸಮಾಗಮ, ಇವೆಲ್ಲದರ ನಡುವೆ ದೂರದ ಒರಿಸ್ಸಾ ಮತ್ತು ಅಸ್ಸಾಂ ನಿಂದ ಬಂದು ಗದ್ದೆಗೆ ಇಳಿದಿದ್ದ ಯುವ ಪಡೆ.

ಇವೆಲ್ಲ ಕಂಡು ಬಂದಿದ್ದು ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಇವರು ಆಯೋಜಿಸಿದ್ದ ಗ್ರಾಮದ ಗೌಜಿ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ.
ಅಳಿಯುತ್ತಿರುವ ಕೃಷಿ ಬದುಕು ಪರಂಪರೆಯನ್ನು ಇಂದಿನ ಯುವ ಸಮುದಾಯಕ್ಕೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮತ್ತು ಮರೆಯಾಗುತ್ತಿರುವ ಗ್ರಾಮೀಣ ಕ್ರೀಡಾ ಕೂಟ ಮತ್ತು ಆಹಾರ ಪದ್ದತಿಯನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಯ ಪಡಿಸುವ ಉದ್ದೇಶದೊಂದಿಗೆ ಗ್ರಾಮಗ್ರಾಮಗಳ ನಡುವಿನ ಸಹೌರ್ದವನ್ನೂ ಭದ್ರಗೊಳೀಸುವ ಸಲುವಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಸಿಹಿತ್ಲು ಗ್ರಾಮದ ಗೌಜಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಸ್ಥಳೀಯ ಕಂಪೆನಿಯೊಂದರಲ್ಲಿ ದುಡಿಯುತ್ತಿರುವ ಒರಿಸ್ಸಾ ಮತ್ತು ಅಸ್ಸಾಂ ಮೂಲದ ಐವತ್ತಕ್ಕೂ ಅಧಿಕ ಮಂದಿ ಯುವಕರು ಉತ್ಸಾಹದಿಂದ ಬೆಳಗ್ಗಿನಿಂದ ಸಂಜೆಯವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಪರ್ಧಿಸಿ ಊರಿನ ಯುವಕರನ್ನೇ ಮೀರಿಸಿ ಬಹುಮಾನ ಗೆದ್ದಿರುವುದು ವಿಶೇಷವಾಗಿತ್ತು. ಮಳೆಯನ್ನೂ ಲೆಕ್ಕಿಸದೆ ಮಕ್ಕಳು ಮತ್ತು ಮಹಿಳೆಯರು ಗದ್ದೆಯಲ್ಲಿ ತಮ್ಮ ಪ್ರತಿಭೆ ಮೇಳೈಸಿದ್ದರು. ಈವರೆಗೆ ವೇದಿಕೆಯಲ್ಲಿ ಜಾನಪದ ನೃತ್ಯ ಮಾಡುತ್ತಿದ್ದ ಮಕ್ಕಳು ಮತ್ತು ಯುವತಿಯರು ಇಂದು ಉಳುಮೆ ಮಾಡಿದ್ದ ಗದ್ದೆಯಲ್ಲಿ ನೃತ್ಯ ಪ್ರದರ್ಶನ ನಡೆಸಿ ಎಲ್ಲೂ ಹೆಜ್ಜೆ ಹಾಕಲು ನಾವು ಸೈ ಎನ್ನುವುದನ್ನು ತೋರಿಸಿಕೊಟ್ಟಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿಕರೂ ಹಿರಿಯರೂ ಆದ ಸಂಜೀವ ಭಟ್ ಅವರು, ನಾವು ಉತ್ತು ಬಿತ್ತಿ ಬೆಳೆ ಮಾಡಿ ಮಕ್ಕಳಂತೆ ಸಾಕಿದ್ದ ಗದ್ದೆಯಲ್ಲಿ ಇಂದಿನ ಯುವಕರು ಕಾರ್ಯಕ್ರಮದ ನೆಪದಲ್ಲಿ ಹುಚ್ಚಾಟ ನಡೆಸುತ್ತಾರೆ ಎನ್ನುವ ಆತಂಕ ಕಾಡಿತ್ತು. ಆದರೆ ಮರೆಯಾಗುತ್ತಿರುವ ಸಂಸ್ಕೃತಿಯನ್ನೂ ಈ ರೀತಿಯೂ ನೆನಪಿಸಿ ಉಳಿಸಿಕೊಳ್ಳ ಬಹುದು ಎನ್ನುವುದನ್ನು ಕಂಡಾಗ ಖುಷಿ ಆಗಿದೆ, ಕೃಷಿ ಪ್ರೀತಿಯನ್ನು ಎಲ್ಲರಲ್ಲೂ ಹುಟ್ಟು ಹಾಕುವುದು ಅಸಾಧ್ಯ ಆದರೆ ಇಂತಹ ಕಾರ್ಯಕ್ರಮದ ಮೂಲಕ ಅಲ್ಪಸ್ವಲ್ಪವಾದರೂ ಕೃಷಿ ಜ್ಞಾನ ಉಂಟು ಮಾಡಬಹುದು ಎಂದರು.
ಎಷ್ಟೋ ವರುಷದಿಂದ ಪಾಳು ಬಿದಿದ್ದ ಗದ್ದೆ ಇನ್ನೂ ಹಾಗೆಯೇ ಮಣ್ಣು ಮುಚ್ಚಿ ಹೋಗುತ್ತದೆ ಎಂದು ಕೊಂಡಿದ್ದೆ ಆದರೆ ಇಂದು ಅದು ಮತ್ತೆ ಉಳುಮೆ ಆಗಿದೆ ಎಂದರೆ ಅದು ನಾರಾಯಣ ಗುರು ಸೇವಾ ಸಂಘದ ಪದಾಧಿಕಾರಿಗಳ ಪರಿಶ್ರಮದ ಫಲ ಇದು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಜಾನಪದ ವಿದ್ವಾಂಸರಾದ ಡಾ.ಗಣೇಶ್ ಅಮೀನ ಸಂಕಮಾರ್ ಅವರು ಮಾತನಾಡಿ. ಅಂದು ಕೃಷಿಯ ಜೊತೆ ಬದುಕಿ, ಕೃಷಿಗಾಗಿ ಹೋರಾಡಿ, ಕೃಷಿಯಿಂದಲೇ ಒಂದು ಸ್ಥಾನಮಾನ ಕಂಡುಕೊಂಡ ಹಿರಿಯರು ಇಂದು ಕೃಷಿ ಪ್ರೀತಿ ಇದ್ದರೂ ಕೃಷಿ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಒಂದು ರೀತಿಯ ವಿಶ್ರಾಂತಿ ಅವರದ್ದು ಆದರೆ ದುರಂತ ಎಂದರೆ ಯರು ಕೃಷಿ ಮಾಡಬೇಕಾಗಿತ್ತೋ ಅಂತಹ ಯುವ ಸಮುದಾಯವೂ ವಿಶ್ರಾಂತಿಯಲ್ಲಿದೆ ಕೃಷಿಗದ್ದೆಯನ್ನು ಮಾರಾಟ ಮಾಡಿ ಹಣ ಮಾಡುವ ಹಂತ ಬೆಳೆಯುತ್ತಿದೆ. ಇಂದಿನ ಸಾಮಾಜಿಕ ದಿನದಲ್ಲಿ ಅದು ಉತ್ತಮ ಬೆಳವಣಿಗೆ ಅಲ್ಲ. ಕೃಷಿ ಭಾಷೆಗಳು, ಜಾನಪದೀಯ ಶಬ್ದಗಳು, ಆಚಾರ ವಿಚಾರ ಕಥೆ, ಪಾಡ್ದನ ಎಲ್ಲವೂ ಕೃಷಿಯ ಜೊತೆಗೆ ಅಳಿಯುವ ಹಂತಕ್ಕೆ ಬಂದಿದೆ. ಅದನ್ನು ಉಳಿಸುವ ಮನಸ್ಥಿತಿ ಇಂದು ಇಂತಹ ಕಾರ್ಯಕ್ರಮದ ಮೂಲಕ ಆಗುತ್ತಿದೆ ಎಂದರು.
ಅತಿಥಿಗಳು ಗದ್ದೆಗೆ ಹಾಲು, ನೀರು, ಎಳನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಸಿಹಿತ್ಲು ಇದರ ಗೌರವಾಧ್ಯಕ್ಷರಾದ ಶ್ರಿ ಚಂದಯ್ಯ ಬಿ.ಕರ್ಕೇರಾ ಇವರು ಅಧ್ಯಕ್ಷತೆ ವಹಿಸಿದ್ದರು. 80 ರ ಹರೆಯದಲ್ಲೂ ಕೃಷಿ ಮಾಡುತ್ತಿರುವ ರಕ್ಕಯ್ಯ ಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಕೃಷಿಕರಾದ ಶೇಖರ ದೇವಾಡಿಗ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಸಿಹಿತ್ಲು ಇದರ ಅಧ್ಯಕ್ಷರಾದ ಪ್ರಕಾಶ್ ಕುಮಾರ್ ಬಿ.ಎನ್, ಸಂಘದ ಮುಖ್ಯ ಸಂಚಾಲಕರಾದ ಚಂದ್ರಶೇಖರ್ ನಾನಿಲ್, ಕಾರ್ಯಕ್ರಮದ ಸಂಚಾಲಕರಾದ ಮಹಾಬಲ ಪೂಜಾರಿ ಕಡಂಬೋಡಿ, ಹಳೆಯಂಗಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಲಜ, ಮಾಜಿ ಅಧ್ಯಕ್ಷರಾದ ಶ್ರೀ ವಸಂತ ಬೆರ್ನಾಡ್, ಸದಸ್ಯೆ ಗುಣವತಿ, ಬಿಲ್ಲವರ ಹಿತವರ್ಧಕ ಸಂಘದ ಅಧ್ಯಕ್ಷರಾದ ಎಸ್.ದಯಾನಂದ್ ಮುಂತಾದವರು ಉಪಸ್ಥಿತಿರಿದ್ದರು.
ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ವಿವಿಧ ಸ್ಪರ್ಧೆಯಲ್ಲಿ ಊರ ಪರವೂರಿನ 16 ತಂಡಗಳು ಭಾಗವಹಿಸಿದ್ದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚಾಲಿಪೋಲಿಲು ಚಿತ್ರದ ಖ್ಯಾತಿಯ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮತ್ತು ನವರ ರಾಜೆ ಭೋಜರಾಜ್ ವಾಮಂಜೂರು ಬಹುಮಾನ ವಿತರಿಸಿದರು. ತುಳುಕೂಟ ದುಬೈ ಇದರ ದಯಾ ಕಿರೋಡಿಯನ್, ಕೃಷ್ಣರಾಜತಂತ್ರಿ ಮತ್ತು ಕನರ್ೂರು ಮೋಹನ್ ರೈ , ಸಂಘದ ಮಾಜಿ ಅಧ್ಯಕ್ಷರಾದ ಧನ್ರಾಜ್ ಕೋಟ್ಯಾನ್, ಮಧು ಕುಕ್ಯಾನ್, ಮಧು ಸುವರ್ಣ, ನಾಗೇಶ್ ಮುಂತಾದವರು ಉಪಸ್ಥಿತರಿದ್ದರು. ಪ್ರಕಾಶ್ ಕುಮಾರ್ ಬಿ.ಎನ್ ಸ್ವಾಗತಿಸಿದ್ದು ಪರಮಾನಂದ ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿದರು, ನರೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


