ಮೂಡುಬಿದರೆ: ಪುರಸಭೆಯ ಪ್ರಸ್ತಾವಿತ ನೂತನ ಮಾರುಕಟ್ಟೆ ನಿರ್ಮಾಣ ಮತ್ತು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ನಿರ್ಧಾರವನ್ನು ಕೈಬಿಟ್ಟು ಸರ್ಕಾರಿ ಅನುದಾನದಲ್ಲೆ ಮಾರುಕಟ್ಟೆಯನ್ನು ನಿರ್ಮಿಸಬೇಕು ಎಂದು ಮಾರುಕಟ್ಟೆ ವ್ಯಾಪಾರಸ್ಥರ ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಅಧ್ಯಕ್ಷ ಎ.ಎಲ್ ವಾಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಮಾರು 0.90 ಎಕ್ರೆ ವಿಸ್ತೀರ್ಣವನ್ನು ಹೊಂದಿರುವ ಮಾರುಕಟ್ಟೆ ಜಾಗಕ್ಕೆ ಈಗಿನ ಮಾರುಕಟ್ಟೆ ಬೆಲೆ ಅಂದಾಜು 10 ಲಕ್ಷ ಇದೆ. ಇಷ್ಟು ಬೆಲೆ ಬಾಳುವ ಆಸ್ತಿಯನ್ನು ಪುರಸಭೆ ಖಾಸಗಿ ಸಂಸ್ಥೆಗೆ ವಹಿಸಿಕೊಡುವುದಕ್ಕೆ ವಿರೋಧವಿದೆ ಎಂದರು. ಮಾರುಕಟ್ಟೆ ನಿರ್ಮಾ ಣಕ್ಕೆ ಈಗಾಗಲೇ ಮೂಡುಬಿದಿರೆ ಕೊಆಪರೇಟಿವ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ಗಳು ಹಣಕಾಸು ನೆರವು ನೀಡಲು ಮುಂದೆ ಬಂದಿವೆ. ಆದರೆ ಪುರಸಭೆ ಅವರ ಸಹಕಾರವನ್ನು ಪಡೆಯುಲು ಹಿಂದೇಟು ಹಾಕುತ್ತಿರುವುದರ ಮರ್ಮವೇನು ಎಂದು ಪ್ರಶ್ನಿಸಿದರು.
ಮಾರುಕಟ್ಟೆ ರೂಪುರೇಷೆ ಸಿದ್ಧಪಡಿಸುವಾಗ ಇಲ್ಲಿನ ವ್ಯಾಪಾರಿಗಳ ಅಭಿಪ್ರಾಯವನ್ನು ಪಡೆದಿಲ್ಲ. ಈಗಿರುವ ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆಯಲ್ಲಿ ಅಂಗಡಿ ಕೋಣೆಗಳನ್ನು ನೀಡುವ ಬಗ್ಗೆ ಪುರಸಭೆ ಯಾವುದೇ ಗ್ಯಾರಂಟಿ ನೀಡಿಲ್ಲ ಹಾಗೂ ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿಲ್ಲ. ಪುರಸಭೆಯ ನಡೆ ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ಹೊಸ ಮಾರುಕಟ್ಟೆಯನ್ನು ಸರಕಾರಿ ಅನುದಾನದಲ್ಲೆ ಕಟ್ಟಬೇಕು ಮತ್ತು ಈಗಿರುವ ವ್ಯಾಪಾರಿಗಳಿಗೆ ಹೊಸ ಕಟ್ಟಡದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಬೇಕು. ಇದಕ್ಕೆ ತಪ್ಪಿದಲ್ಲಿ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಈ ಬಗ್ಗೆ ಮುಂದಿನ ವಾರದಲ್ಲಿ ವ್ಯಾಪಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಕೆಲವು ರಾಜಕಾರಣಿಗಳು ಸಾರ್ವಜನಿಕರ ಹಣ ಲೂಟಿ ಮಾಡಿ ಕೋಟ್ಯಾಧಿಪತಿಗಳಾಗಿರಬಹುದು ಆದರೆ ಮಾರುಕಟ್ಟೆ ವ್ಯಾಪಾರಿಗಳು ಕೋಟ್ಯಾಧಿಪತಿಗಳಲ್ಲ. ನಮ್ಮದು ಪರಿಶ್ರಮದ ಸಂಪಾದನೆ ಎಂದು ಮಾರುಕಟ್ಟೆ ವ್ಯಾಪಾರಸ್ಥರ ಒಕ್ಕೂಟದ ಮಾಜಿ ಅಧ್ಯಕ್ಷ ರಮೇಶ್ ರಾವ್ ಹೇಳಿದರು. ಒಕ್ಕೂಟದ ಕಾರ್ಯದರ್ಶಿ ಸುಧೀಶ್ ಕುಮಾರ್, ಉಪಾಧ್ಯಕ್ಷ ರತ್ನಾಕರ ದೇವಾಡಿಗ ಜತೆಕಾರ್ಯದರ್ಶಿ ಅಶ್ರಫ್, ಖಜಾಂಜಿ ಗೀತಾ ಕಾಮತ್ ಇದ್ದರು.
