ಮುಂಬಯಿ: ಸದಾಶಯ, ಸಹಬಾಳ್ವೆಯ ಧರ್ಮಾಚರಣೆಯಿಂದಲೇ ಮಾನವ ಜೀವನ ಫಲಪ್ರದವಾಗುವುದು. ನಮ್ಮ ಪುಣ್ಯ ಭೂಮಿಯಲ್ಲಿ ಭ್ರಾತೃತ್ವ ಭಾವ ಮೂಢಿಸಿದ ಭಾರತೀಯ ಸಂಸ್ಕೃತಿ ಪಾವಿತ್ರ್ಯತೆಯನ್ನು ಹೊಂದಿದ್ದು ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುವುದು. ಸಮನ್ವಯ ದೃಷ್ಟಿಕೋನದಿಂದ ಬೆಸೆದ ನಮ್ಮ ಧರ್ಮದ ಜಾಗೃತಿಗೆ ಪುರಾತನ ಕಾಲದಿಂದಲೂ ಮಹಾಮಹಿಮರು ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರೆಲ್ಲರ ಋಣ ಸಂದಬೇಕಾದರೆ ನಾವುಗಳೂ ಅವರ ಜೀವನಶೈಲಿಯಲ್ಲೇ ಮುನ್ನಡೆದು ಅವರ ಬೋಧನೆ, ಆಚರಣೆಗಳಿಂದ ಮುನ್ನಡೆಯವ ಅಗತ್ಯ ಪ್ರತೀಯೋರ್ವ ಭಾರತೀಯರಿಗಿದೆ. ಸರ್ವರೂ ಅಧರ್ಮದ ವಿರುದ್ಧ ಸಮರತಾಳಿ ಭಾವೈಕ್ಯದ ಬದುಕಿನ ಜಯ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದಾಗ ಪ್ರತೀಯೋರ್ವರ ಬಾಳು ಹಸನಾಗುವುದು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಮಠದ ಚೆಂಬೂರು ಶಾಖೆಗೆ ಚರಣಸ್ಪರ್ಶಗೈದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರು
ಅವರು ಮಂಗಳವಾರ ಸಂಜೆ ಮಹಾನಗರದ ಚೆಂಬೂರು ಪಶ್ಚಿಮದಲ್ಲಿನಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ಶಾಖೆಗೆ ಆಗಮಿಸಿ ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪೂಜೆಗಳನ್ನು ನೆರವೇರಿಸಿ ಮಹಾ ಆರತಿಗೈದು ನೆರೆದ ಭಕ್ತರಿಗೆ ಪ್ರಸಾದ ವಿತರಿಸಿ ಅನುಗ್ರಹಿಸಿದರು.
ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ವಿದ್ಯಾಪ್ರಸನ್ನ ತೀರ್ಥರು ಭಾರತೀಯ ಸಂಸ್ಕೃತಿ ಪ್ರಪಂಚಕ್ಕೆ ಆದರ್ಶ ಸಂಸ್ಕೃತಿ. ಪಾಶ್ಚತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಸನಾತನ ಸಂಸ್ಕೃತಿಗೆ ಅದರ್ಮ ಉಂಟಾಗಬಾರದು. ಅದಕ್ಕೆ ವಿಶೇಷವಾಗಿ ಪೋಷಕರ ಕಾಳಜಿ ತೀರಾ ಅಗತ್ಯ.ನಮ್ಮ ಪೂರ್ವಜರು ನಮಗೆ ಸಾತ್ವಿಕವಾದ ಮಾರ್ಗದರ್ಶನ ನೀಡಿ ನಮ್ಮನ್ನು ಒಳಿತಿನತ್ತ ಸಾಗಿಸಿದ್ದಾರೆ. ಆದುದರಿಂದ ನಾವೂ ಕೂಡಾ ನಮ್ಮ ಪರಂಪರೆಯನ್ನು ಒಳ್ಳೆಯ ಕಡೆ ಸಾಗಿಸುವ ಹೊಣೆ ನಮ್ಮದಾಗಬೇಕು. ದೇಶವನ್ನು ಮುನ್ನಡೆಸುವ ಜನಪ್ರತಿನಿಧಿಗಳಲ್ಲೂ ಪ್ರಜಾಪ್ರಭುತ್ವದ ಈ ಕಾಲದಲ್ಲಿ ಆರಿಸುವ ಹೊಣೆಗಾರಿಕೆ ಪ್ರಜೆಗಳಿಗಿದೆ.
ಸುಶಿಕ್ಷಿತವಾದ ಇಂದಿನ ಯುವ ಸಮುದಾಯ ಒಳ್ಳೆಯ ನೇತಾರರನ್ನು ಆಯ್ಕೆ ಮಾಡುವುದರ ಮೂಲಕ ರಾಷ್ಟ್ರವನ್ನು ವಿಶ್ವಕ್ಕೆ ಮಾದರಿಯಾಗಿಸ ಬೇಕಾಗಿದೆ. ಸಮೃದ್ಧವಾದ ದೇಶವನ್ನು ರೂಪಿಸುವ ಜವಾಬ್ದಾರಿ ಯುವಜನತೆ ನಿಷ್ಠೆಯಿಂದ ವಹಿಸುವ ಅಗತ್ಯವಿದೆ. ಆಧುನಿಕ ಕಾಲಘಟ್ಟದ ಪರಿಣಾಮವಾಗಿ ಜನ ಸಮುದಾಯ ಶಾಂತಿಯ ಬದುಕನ್ನು ಕಳೆದು ಕೊಳ್ಳುತ್ತಿದೆ. ಇಂತಹ ಮಂದಿಯ ಮಾನಸಿಕ
ನೆಮ್ಮದಿಗೆ ದೇವತಾರಾಧನೆ, ಪ್ರಾರ್ಥನೆ, ಸನಾತನ ಗ್ರಂಥಗಳ ಅಧ್ಯಾಯನ ನಿತ್ಯನಿರಂತರ ನಡೆಯಲಿ ಎಂದೂ ಭಕ್ತರಿಗೆ ಹಿತನುಡಿಗಳನ್ನಾಡಿದರು. ಶ್ರೀಪಾದರು ಇಂದಿನಿಂದ ಇದೇ ಜುಲೈ.08ರ ತನಕ ಮುಂಬಯಿಯಲ್ಲಿ ವಾಸ್ತವ್ಯವಾಗಿ ನಗರದ ಅನೇಕ
ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬಹುತೇಕವಾಗಿ ಮಠದಲ್ಲಿರುವ ಕಾರಣ ಮಠಕ್ಕೆ ಆಗಮಿಸುವ ಸರ್ವ ಭಕ್ತಾಭಿಮಾನಿಗಳಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮತ್ತು ನಾಗದೇವರ ದರ್ಶನ ಪಡೆಯುವ ಅವಕಾಶವಿದ್ದು ಶ್ರೀಗಳಲೇ ಮಂತ್ರಾಕ್ಷತೆ, ಆಶೀರ್ವಚನ ನೀಡಲಿರುವರು ಎಂದು ಮಠದ ಮಠದ ವ್ಯವಸ್ಥಾಪಕರುಗಳಾದ ವಿಷ್ಣು ಕಾರಂತ್ ಮತ್ತು ಶ್ರೀಪ್ರಸಾದ್ ಭಟ್ ತಿಳಿಸಿದ್ದಾರೆ.
ಚಿತ್ರ:ರೋನ್ಸ್ ಬಂಟ್ವಾಳ್


