ಕಳೆದ ನವೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ ಸಾವಿಗೆ ಮತ್ತು ಸರಕಾರಕ್ಕೆ ಸಂಬಂಧ ಇಲ್ಲ. ಅದಕ್ಕೆ ನಾವು ಕಾರಣರಲ್ಲ ಅವರು ಚೆನ್ನಾಗಿ ಕುಡಿದಿದ್ದರು .ಆ ಮತ್ತಿನಲ್ಲಿ ಈ ಕೃತ್ಯವೆಸಗಿದ್ದಾರೆ. ಅದಕ್ಕೆ ಸರಕಾರ ಹೊಣೆ ಅಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ.
ಕೊಡಗು- ಮೈಸೂರು ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿ ವಿಶ್ವನಾಥ ಪರವಾಗಿ ನಿನ್ನೆ ರಾತ್ರಿ ನಾಪೋಕ್ಲುವಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಈ ಹೇಳಿಕೆಯನ್ನು ನೀಡಿದ್ದಾರೆ.
ನವೆಂಬರ್ 27, 2013ರಂದು ಬೆಳಗಾವಿ ಅಧಿವೇಶನದ ವೇಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ವಿಠಲ ಅರಭಾವಿ ಸಾವಿಗೂ ತಮ್ಮ ಸರಕಾರಕ್ಕೂ ಸಂಬಂಧ ಇಲ್ಲ ಎಂದ ಮುಖ್ಯಮಂತ್ರಿಯವರ ಉಡಾಫೆ ಮಾತುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಮ್ಮ ಈ ಬೇಜವಾಬ್ದಾರಿ ಹೇಳಿಕೆಗೆ ಮುಖ್ಯಮಂತ್ರಿಯವರು ಜನರಿಗೆ ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಮಾತನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅಧಿಕಾರ ಕಳೆದುಕೊಳ್ಳುವ ಭಯದಿಂದ ಅವರು ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಮೂಲಕ ಅವರು ಅನ್ನ ನೀಡುವ ರೈತರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

