ಸುದ್ದಿ9 ಕೈಕಂಬ: ಎಡಪದವು ನವನಿರ್ಮಾಣಗೊಂಡ ನೂತನ ಶ್ರೀ ರಾಮ ಮಂದಿರದ ಶಿಲಾಮಯ ಗರ್ಭಗುಡಿಯಲ್ಲಿ ಪಟ್ಟಾಭಿರಾಮಚಂದ್ರ ದೇವರಿಗೆ ಜೀವ ಕುಂಭಾಭಿಷೇಕ ಪೂರ್ವಕ ಪ್ರಾಣಪ್ರತಿಷ್ಠಾಪನೆ ಹಾಗೂ ಏಕೋತ್ತರ ತ್ರಿಶತ ಕಲಶಸಹಿತ ಬ್ರಹ್ಮಕಲಶಾಭಿಷೇಕ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜೂ.11 ರಂದು ಗುರುವಾರ ಜರಗಿತು.
ಎಡಪದವು ವೇದಮೂರ್ತಿ ವೆಂಕಟೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪಲ್ಕೆ ರತೀಶ್ ಭಟ್ ಹಾಗೂ ಎಡಪದವು ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.
ಉಡುಪಿ ಮಠದ ಶ್ರೀಗಳಿಂದ ಕಲಶಾಭಿಷೇಕ

ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಶ ತೀರ್ಥ ಸ್ವಾಮೀಜಿ ಅವರು ನೂತನ ಗರ್ಭಗುಡಿಯಲ್ಲಿ ಶ್ರೀ ಪಟ್ಟಾಭಿರಾಮಚಂದ್ರ ದೇವರಿಗೆ *ಬ್ರಹ್ಮಕಲಶ ಅಭಿಷೇಕ* ಗೈದು ಅನುಗ್ರಹ ಸಂದೇಶ ನೀಡಿದರು. *ರಾಮ – ಹನುಮ ತತ್ವಗಳನ್ನು ಭಾರತೀಯರು ಪಾಲಿಸಿದಾಗ ಮಾತ್ರ ದೇಶ ರಾಮರಾಜ್ಯವಾಗಲು ಸಾಧ್ಯ.* ಎಂದರು.
ಮಂದಿರದ ಸಮಿತಿಯ ಗೌರವಾಧ್ಯಕ್ಷಗಳಾದ ಮಿಜಾರುಗುತ್ತು ಆನಂದ ಆಳ್ವ, ಎಂ. ಜೀವಧರ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ್ ನಾಕ್ ಉಳಿಪಡಿಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ, ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಎನ್. ಮುರಳಿಧರ ಶೆಟ್ಟಿ,ಯಾಧವ ಕೋಟ್ಯಾನ್, ಕಾರ್ಯದರ್ಶಿ ಪ್ರಸಾದ್ ಕುಮಾರ್ ಎಂ. ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಇದೇ ಸಂದರ್ಭ ರಾಮತಾರಕ ಹೋಮ, ಸಂಜೆ ಅಲಂಕಾರ ಪೂಜೆ, ದೀಪಾರಾಧನೆ, ರಂಗ ಪೂಜೆ ಜರಗಿತು.
ಮಧ್ಯಾಹ್ನ ಜರಗಿದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.









