ಮಂಗಳೂರು: ಈ ವರ್ಷದ ಪಿ.ಯು.ಸಿ. ಫಲಿತಾಂಶದಲ್ಲಿ ಒಟ್ಟು ಶೇಕಡಾವಾರು ಫಲಿತಾಂಶ ಸುಧಾರಣೆಯಾಗಿದೆ. ಆದರೆ, ದ್ವಿತೀಯ ಪಿ.ಯು.ಸಿ. ಪರೀಕ್ಷಾ ದಿನ­ಗಳಿಂದ ಪ್ರಾರಂಭಗೊಂಡು ಇಂದಿನ­ವರೆಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಸಾರ್ವ­ಜನಿಕರಲ್ಲಿ ಆತಂಕ ಹಾಗೂ ಗೊಂದಲ­ವನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳ ಹಾಗೂ ಅವರ ಪೋಷಕರ ಗೊಂದಲವನ್ನು ನಿವಾರಿಸುವಲ್ಲಿ ಇಲಾಖೆ ಹಾಗೂ ಸರ್ಕಾರ ತೋರುತ್ತಿರುವ ಬೇಜವಾಬ್ದಾರಿ ಧೋ­ರಣೆ­­­ಯನ್ನು ಖಂಡಿಸುವುದಾಗಿ ಶಾಸಕ ಗಣೇಶ್‌ ಕಾರ್ಣಿಕ್‌ ಅವರು ತಿಳಿಸಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಈ ಕುರಿತು ಕೈಚೆಲ್ಲಿ ಸುಮ್ಮನೆ ಕುಳಿತುಕೊಳ್ಳದೆ ಶೀಘ್ರ ಪರಿಹಾರ ಕೈಗೊಳ್ಳಲು ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪರೀಕ್ಷಾ ಸಂದರ್ಭದಲ್ಲಿ ­ಪ್ರಶ್ನೆಪತ್ರಿಕೆಗಳಲ್ಲಿ ಉಂಟಾದ ಗೊಂದಲ, ಗ್ರೇಸ್ ಮಾರ್ಕ್ ನೀಡಿಕೆ ನಿರ್ಣಯ ಹಾಗೂ ಹಂಚಿಕೆ ಗೊಂದಲ, ಆನ್ ಲೈನ್ ಫಲಿತಾಂಶ ಪ್ರಕಟಣೆಯಲ್ಲಿನ ಗೊಂದಲ, ಸಣ್ಣ ಇತಿಮಿತಿಯೊಳಗೆ ಇರುತ್ತಿದ್ದ ಮೌಲ್ಯ­ಮಾಪನ ಗೊಂದಲಕ್ಕೆ ವಿರುದ್ಧ­ವಾಗಿ ಈ ಬಾರಿ ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿ­ಗಳು ತಾವು ಪಡೆದಿರುವ ಅಂಕಗಳ ಬಗ್ಗೆ ಆತಂಕ ವ್ಯಕ್ತಪಡಿ­ಸುತ್ತಿರುವುದು ಇಲಾಖೆಯ ಕಾರ್ಯ­ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯ ಮುಂದೆ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಕೆಲವು ದಿನಗಳಿಂದ ನ್ಯಾಯಕ್ಕಾಗಿ ಹೋರಾಟ­ವನ್ನು ನಡೆಸುತ್ತಿದ್ದರೂ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವ ಸರ್ಕಾರದ ಬೇಜವಾಬ್ದಾರಿ ಧೋರಣೆ­ಯನ್ನು ಖಂಡಿಸುವುದಾಗಿ ಅವರು ಹೇಳಿದ್ದಾರೆ. ತೀರ್ಥಹಳ್ಳಿಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿರುವ ಶಿಕ್ಷಣ ಸಚಿವರು ತಮ್ಮ ಕೇಂದ್ರ ಸ್ಥಾನವನ್ನು ಪದವಿಪೂರ್ವ ಶಿಕ್ಷಣ ಇಲಾಖೆಗೆ ಕೂಡಲೇ ವರ್ಗಾಯಿಸಿ, ಹೆತ್ತವರ ಹಾಗೂ ವಿದ್ಯಾರ್ಥಿಗಳ ಆತಂಕವನ್ನು ದೂರ­ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *